ಲಕ್ನೋ/ಮುಜಾಫರ್ನಗರ, ಡಿ.22-ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದ ವಿವಿಧೆಡೆ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ವ್ಯಾಪಕ ಹಾನಿಗೆ ಕಾರಣರಾದ ಗಲಭೆಕೋರರ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡುವ ಕಾರ್ಯ ನಿನ್ನೆಯಿಂದ ಆರಂಭವಾಗಿದೆ.
ಲಕ್ನೋ ಮತ್ತು ಮುಜಾಫರ್ನಗರ ಸೇರಿದಂತೆ ಅನೇಕ ಕಡೆ ಗಲಭೆಕೋರರ ಆಸ್ತಿ-ಪಾಸ್ತಿಗಳನ್ನು ಗುರುತಿಸಿ ಅವುಗಳನ್ನು ಜಪ್ತಿ ಮಾಡಲಾಗುತ್ತಿದೆ.
ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದರೆ ಅದಕ್ಕೆ ಕಾರಣರಾದವರ ಸ್ವತ್ತುಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಎರಡು ದಿನಗಳ ಹಿಂದಷ್ಟೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಗಂಭೀರ ಎಚ್ಚರಿಕೆ ನೀಡಿದ್ದರು.
ನಿನ್ನೆಯಿಂದಲೇ ವಿವಿಧ ಜಿಲ್ಲೆಗಳಲ್ಲಿ ಗಲಭೆಕೋರರಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಿ ಪ್ರತಿಭಟನೆ ವೇಳೆ ಉಂಟಾಗಿರುವ ಹಾನಿಯನ್ನು ಸರಿದೂಗಿಸಿ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಮುಂದುವರೆದಿದೆ.
ಭಾರೀ ಗಲಭೆಯ ಕೇಂದ್ರಬಿಂದುವಾದ ಮುಜಾಫರ್ನಗರದ ಮೀನಾಕ್ಷಿ ಚೌಕ್ ಮತ್ತು ಕಚ್ಛಿ ಸಡಕ್ ಪ್ರದೇಶದಲ್ಲಿ ಗಲಭೆಕೋರರಿಗೆ ಸೇರಿದ 50ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯಪೋಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಯಾದವ್ ತಿಳಿಸಿದ್ದಾರೆ.
ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಧಕ್ಕೆ ಉಂಟು ಮಾಡುವ ಪ್ರತಿಭಟನಾಕಾರರು ಮತ್ತು ಗಲಭೆಕೋರರ ಸ್ವತ್ತುಗಳನ್ನು ಜಪ್ತಿಮಾಡಬಹುದು ಎಂಬ ಸುಪ್ರೀಂಕೋರ್ಟ್ ಆದೇಶದೊಂದಿಗೆ ಈ ಕಾರ್ಯಾಚರಣೆ ತೀವ್ರಗೊಂಡಿದೆ.