ಬೆಂಗಳೂರು, ಡಿ.22- ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಜನವರಿ 17 ರಿಂದ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧಾರ ಮಾಡಿರುವ ಕ್ರಮ ಸರಿಯಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ಕುಮಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿವಿಧ ಮಠಾಧೀಶರ ನೇತೃತ್ವದಲ್ಲಿ ನಡೆದ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಭೆಯಲ್ಲಿ ಕೆಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿರುವ ವಿಷಯ ಅತ್ಯಂತ ದುರದೃಷ್ಟಕರವಾಗಿದೆ. ಏನೇ ಕಾರಣಗಳಿದ್ದರೂ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವುದು ಒಳ್ಳೆಯ ಕ್ರಮವಲ್ಲ ಎಂಬುದು ನನ್ನ ಅನಿಸಿಕೆ. ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ವ್ಯತ್ಯಾಸಗಳು ನಮ್ಮ ಮಕ್ಕಳ ಮೇಲೆ ವಿಪರೀತ ಪರಿಣಾಮ ಬೀರುತ್ತವೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ನಮ್ಮ ಸರ್ಕಾರ ಬಂದ ನಂತರ ಉದ್ಭವಿಸಿರುವ ಸಂಗತಿಗಳಲ್ಲ. ಅನೇಕ ವರ್ಷಗಳಿಂದ (ಸಮ್ಮಿಶ್ರ ಸರ್ಕಾರದ ಅವಧಿಯೂ ಸೇರಿದಂತೆ) ಈ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಲೇ ಬಂದಿದೆ.
ಬೇಡಿಕೆ ಈಡೇರಿಕೆಗೆ ಬೇಕಾಗುವ ಅಪಾರ ಹಣದ ಪ್ರಮಾಣದ ಅರಿವು ನಮಗೆಲ್ಲರಿಗೂ ಇದೆ. ಈ ಬಗ್ಗೆ ಈಗಾಗಲೇ ನಾನು ಉನ್ನತ ಶಿಕ್ಷಣ ಸಚಿವರ ಜತೆ ಚರ್ಚೆ ನಡೆಸಿದ್ದೇನೆ. ಜನವರಿ ಮೊದಲ ವಾರದಲ್ಲಿ ತಮ್ಮೊಡನೆಯೂ ಕೂಡ ಚರ್ಚೆ ನಡೆಸುವ ಚಿಂತನೆ ಮಾಡಿದ್ದೇನೆ. ದಯವಿಟ್ಟು ಪರೀಕ್ಷೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಶಾಲಾ-ಕಾಲೇಜುಗಳ ಬಂದ್ ಕಾರ್ಯಕ್ರಮಗಳನ್ನು ಕೈ ಬಿಡಿ ಎಂದು ಮನವಿ ಮಾಡಿದ್ದಾರೆ.
ಶಿಕ್ಷಣ ಇಲಾಖೆಯ ಕೇಂದ್ರ ಬಿಂದು ನಮ್ಮ ಮಕ್ಕಳು. ಅವರಿಗೆ ತೊಂದರೆ, ಆತಂಕ ಕಿಂಚಿತ್ತೂ ಆಗಬಾರದು. ಸಭೆಯ ದಿನಾಂಕವನ್ನು ಸದ್ಯದಲ್ಲೇ ತಿಳಿಸುತ್ತೇನೆ. ನಾವೆಲ್ಲ ಕುಳಿತು ಚರ್ಚಿಸಿ ಸಮಸ್ಯೆಗೆ ಪರಿಹಾರ ಹುಡುಕೋಣ. ಯಾವುದೇ ಕಾರಣಕ್ಕೂ ಬಂದ್ ಬೇಡ ಎಂದು ಅವರು ಬಸವರಾಜ ಹೊರಟ್ಟಿ ಅವರಲ್ಲಿ ಮನವಿ ಮಾಡಿದ್ದಾರೆ.
ತಾವು ವಿಧಾನ ಪರಿಷತ್ನ ಅತ್ಯಂತ ಹಿರಿಯ, ಪ್ರಜ್ಞಾವಂತ, ಅನುಭವಿ ಸದಸ್ಯರು. ಸಭಾಪತಿಗಳಾಗಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದೀರಿ. ನಿಮ್ಮ ಸಲಹೆಗಳನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.