ನನ್ನನ್ನೂ ಜೈಲಿಗೆ ಹಾಕಿ-ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು, ಡಿ.21-ತುರ್ತು ಪರಿಸ್ಥಿತಿ ಜಾರಿಗೊಳಿಸಿ, ನನ್ನನ್ನೂ ಜೈಲಿಗೆ ಹಾಕಿ ಎಂದು ಸವಾಲು ಹಾಕುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಮಂಗಳೂರಿನಲ್ಲಿ ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನಿನ್ನೆಯೇ ಮಂಗಳೂರಿಗೆ ಭೇಟಿ ನೀಡಲು ಮುಂದಾಗಿದ್ದರು. ಆದರೆ ಅವರ ವಿಶೇಷ ವಿಮಾನ ನಿಲುಗಡೆಗೆ ಪೋಲೀಸರು ಅನುಮತಿ ನಿರಾಕರಿಸಿದ್ದರು.

ಇಂದು ರೆಗ್ಯುಲರ್ ಫ್ಲೈಟ್‍ನಲ್ಲಿ ಹೋಗಲು ಮುಂದಾದರಾದರೂ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಪ್ರವಾಸದ ಹಿನ್ನೆಲೆಯಲ್ಲಿ ತಮ್ಮ ಪ್ರವಾಸವನ್ನು ಭಾನುವಾರಕ್ಕೆ ಮುಂದೂಡಿದ್ದರು. ಈಗ ಮಂಗಳೂರು ಪೋಲೀಸ್ ಆಯುಕ್ತರು ಹೊಸದಾಗಿ ನೋಟೀಸ್ ನೀಡಿದ್ದು, ಡಿ.19ರಂದು ನಡೆದ ಪ್ರತಿಭಟನೆಯಲ್ಲಿ ಕೆಲವು ಹಿಂಸಾತ್ಮಕ ಘಟನೆಗಳು ನಡೆದಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿನ್ನೆಯಿಂದ ಡಿ.22ರ ಮಧ್ಯರಾತ್ರಿ 12ಗಂಟೆಯವರೆಗೂ ಮಂಗಳೂರು ಪೋಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಫ್ರ್ಯೂ ಜಾರಿಗೊಳಿಸಲಾಗಿದೆ.

ಈ ಸಂಬಂಧ ತಾವು ಮಂಗಳೂರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಗೋವಾ ಏರ್ಪೋರ್ಟ್ನಿಂದ ವಾಹನ, ರೈಲ್ವೆ, ವಾಯುಸಂಚಾರ ಸೇರಿದಂತೆ ಯಾವುದೇ ಮಾರ್ಗದಲ್ಲೂ ನೀವು ಮಂಗಳೂರಿಗೆ ಬರುವಂತಿಲ್ಲ ಎಂದು ಅಲ್ಲಿನ ಪೋಲೀಸ್ ಆಯುಕ್ತ ಪಿ.ಎಸ್.ಹರ್ಷ ನೋಟಿಸ್ ನೀಡಿದ್ದಾರೆ.

ಇದನ್ನು ಖಂಡಿಸಿ ಸಿದ್ದರಾಮಯ್ಯ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕನಾದ ನನ್ನ ಹಕ್ಕನ್ನು ರಾಜ್ಯಸರ್ಕಾರ ದಮನ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತವಾಗಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ, ನಮ್ಮನ್ನೆಲ್ಲ ಜೈಲಿಗೆ ಹಾಕಿ ನಿಮ್ಮ ಮನಸೋ ಇಚ್ಛೆ ರಾಜ್ಯಭಾರ ಮಾಡಿ. ನಮ್ಮ ಜನರನ್ನು ನಾವು ಭೇಟಿಯಾಗದಂತೆ ನಿಷೇಧಿಸಿ, ಹಿಂಸಿಸಬೇಡಿ ಎಂದಿದ್ದಾರೆ.

ಮಂಗಳೂರಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರುಗಳು ಮಂಗಳೂರಿಗೆ ಭೇಟಿ ನೀಡುವುದೇ ಆದರೆ, ವಿರೋಧ ಪಕ್ಷದ ನಾಯಕನಾಗಿ ನಾನು ಏಕೆ ಹೋಗಬಾರದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಗಳೂರಿನ ಹಿಂಸಾಚಾರದಲ್ಲಿ ಪೋಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಆ ಕಾರಣಕ್ಕಾಗಿಯೇ ನಮ್ಮನ್ನು ಅಲ್ಲಿಗೆ ಹೋಗಲು ನಿರ್ಬಂಧಿಸಲಾಗುತ್ತಿದೆ.

ನಿಷೇಧಾಜ್ಞೆ ಜಾರಿಯಲ್ಲಿದ್ದಾಗ ಯಾವ ಪ್ರತಿಭಟನೆಯೂ ನಡೆಯಬಾರದು ಯಾವ ನ್ಯಾಯಾಲಯ ಹೇಳಿಲ್ಲ. ನಿನ್ನೆ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆಗಳು ನಡೆದಿವೆ. ಎಲ್ಲೂ ನಡೆಯದ ಗೋಲಿಬಾರ್ ಮಂಗಳೂರಿನಲ್ಲಿಯೇ ಏಕೆ ನಡೆಯಿತು ಎಂದು ಪ್ರಶ್ನಿಸಿದರು.

ಸಣ್ಣ ಗುಂಪಿನಲ್ಲಿದ್ದ ಪ್ರತಿಭಟನಾಕಾರರನ್ನು ಬಂಧಿಸಬಹುದಿತ್ತು ಅಥವಾ ತಿಳಿ ಹೇಳಿ ಕಳುಹಿಸಬಹುದಿತ್ತು. ಅದನ್ನು ಬಿಟ್ಟು ಗೋಲಿಬಾರ್ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ