ರಾಜ್ಯದ ವಿವಿಧೆಡೆ ವಿವಿಧ ರೀತಿಯಲ್ಲಿ ಜನ ಪ್ರತಿಭಟನೆ

ಬೆಂಗಳೂರು, ಡಿ.21- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಕಿಚ್ಚು ಆರುತ್ತಿಲ್ಲ. ಇಂದು ಕೂಡ ರಾಜ್ಯದ ವಿವಿಧೆಡೆ ವಿವಿಧ ರೀತಿಯಲ್ಲಿ ಜನ ಪ್ರತಿಭಟನೆ, ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನ ಗೋಲಿಬಾರ್ ಘಟನೆ ಖಂಡಿಸಿ ಮಡಿಕೇರಿಯಲ್ಲಿ ಬಂದ್ ನಡೆಸಿದರೆ ಅತ್ತ ಕೊಪ್ಪಳದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಕಲಬುರಗಿಯಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

ರಾಜಧಾನಿ ಬೆಂಗಳೂರಿನಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿ ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಳೆದೆರಡು ದಿನಗಳ ಹಿಂದೆ ಈ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ವ್ಯಾಪಕ ಹಿಂಸಾಚಾರ, ಗೋಲಿಬಾರ್ ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಫ್ರ್ಯೂವನ್ನು ಡಿ.22ರ ವರೆಗೆ ಮುಂದುವರಿಸಲಾಗಿದೆ. ಇಂದು ಬೆಳಗ್ಗೆ ಕಫ್ರ್ಯೂ ಸಡಿಲಿಸಿದ ಸಂದರ್ಭದಲ್ಲಿ ಕಫ್ರ್ಯೂ ಉಲ್ಲಂಘಿಸಿದವರ ಮೇಲೆ ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಮಂಗಳೂರು ನಗರ, ಬಲ್ಮಠ, ಬಂಟ್ವಾಳ ಹಾಸ್ಟೆಲ್ ವೃತ್ತ ಸೇರಿದಂತೆ ಗಸ್ತು ತಿರುಗುತ್ತಿದ್ದ ಪೋಲೀಸರು ಕಫ್ರ್ಯೂ ಉಲ್ಲಂಘಿಸಿದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಒಟ್ಟಾರೆ ಮಂಗಳೂರು ನಗರ ಬಿಕೋ ಎನ್ನುತ್ತಿತ್ತು.

ಗೋಲಿಬಾರ್‍ನಲ್ಲಿ ಇಬ್ಬರು ಮೃತಪಟ್ಟ ಘಟನೆ ಖಂಡಿಸಿ ಮಡಿಕೇರಿ ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್ ನಡೆಸಿದ್ದರು. ಬೆಳಗ್ಗೆಯಿಂದಲೇ ಮಡಿಕೇರಿ ಬಿಕೋ ಎನ್ನುತ್ತಿತ್ತು.

ಅತ್ತ ಉತ್ತರ ಕರ್ನಾಟಕ, ಕೊಪ್ಪಳದಲ್ಲೂ ಪೌರತ್ವ ಕಾಯ್ದೆ ವಿರೋಧಿಸಿ ಜನ ಪ್ರತಿಭಟನೆ ನಡೆಸಿದರು. ರಾಜಧಾನಿ ಬೆಂಗಳೂರಿನಲ್ಲೂ ನಿಷೇಧಾಜ್ಞೆ ನಡುವೆಯೂ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ಬನ್ನೇರುಘಟ್ಟ ರಸ್ತೆಯ ಐಐಎಂಬಿ ಕಾಲೇಜು ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರೋಧಿ ಫಲಕಗಳನ್ನು ಹಿಡಿದು ಕಾಲೇಜು ಹೊರಭಾಗದಲ್ಲಿ ಪಾದರಕ್ಷೆಗಳನ್ನು ಬಿಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿ ವಿಶೇಷ ಗಮನ ಸೆಳೆದರು.

ಮಂಗಳೂರು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144ನೆ ಸೆಕ್ಷನ್ ಜಾರಿಗೊಳಿಸಲಾಗಿದೆ. ಮೂಡಬಿದಿರೆಯ ಚಿನ್ನಯ್ಯಕೋಟೆಯಲ್ಲಿ ಇಂದು ನಡೆಯಬೇಕಿದ್ದ ಕಂಬಳವನ್ನು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.

ಪೌರತ್ವ ಕಾಯ್ದೆ ವಿರೋಧಿಸಿ ಕಳೆದೆರಡು ದಿನಗಳ ಹಿಂದೆ ನಡೆದ ಪ್ರತಿಭಟನೆ, ಹಿಂಸಾಚಾರ, ಗೋಲಿಬಾರ್‍ನಲ್ಲಿ ಇಬ್ಬರು ಮೃತಪಟ್ಟಿದ್ದರು. ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಪೋಲೀಸ್ ಬಂದೋಬಸ್ತ್‍ನಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಲಾಗಿದೆ. ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಮಂಗಳೂರು ಭೇಟಿಗೆ ಪೋಲೀಸರು ಅವಕಾಶ ನೀಡಿಲ್ಲ. ನಿನ್ನೆಯೇ ಮಂಗಳೂರಿಗೆ ಹೊರಟಿದ್ದ ಸಿದ್ದರಾಮಯ್ಯ ಅವರನ್ನು ಮಂಗಳೂರಿಗೆ ಬರದಂತೆ ಪೋಲೀಸರು ಮನವಿ ಮಾಡಿದ್ದರು. ಕಫ್ರ್ಯೂ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಕೂಡ ಭೇಟಿಗೆ ಅವಕಾಶ ಕೊಟ್ಟಿಲ್ಲ. ಸ್ಥಳೀಯ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರೊಂದಿಗೆ ಪೋಲೀಸರು ಮಾತುಕತೆ ನಡೆಸಿ ಶಾಂತಿ ನೆಲೆಸುವ ಪ್ರಯತ್ನ ನಡೆಸಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಇನ್ನೂ ಎರಡು ದಿನ ಬೇಕಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ