ಬೆಂಗಳೂರು; ಮಂಗಳೂರಿನ ಪ್ರಸ್ತುತ ವಾಸ್ತವಾಂಶ ತಿಳಿದು ಅಧಿಕಾರಿಗಳ ಜೊತೆಗೆ ಚರ್ಚಿಸಿ ನಂತರ ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ರಾಜ್ಯಾದ್ಯಂತ ಆರಂಭವಾದ ಪೌರತ್ವ ತಿದ್ದುಪಡಿ ಕಾಯ್ದೆ ಮಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದಿತ್ತು. ನಗರದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆ ಕರ್ಫ್ಯೂ ವಿಧಿಸಿತ್ತು. ಆದರೆ, ಇದನ್ನೂ ಮೀರಿ ಪ್ರತಿಭಟನೆಗೆ ಮುಂದಾಗಿದ್ದ ಇಬ್ಬರು ಯುವಕರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಈ ಪ್ರಕರಣದ ನಂತರ ಇಡೀ ಮಂಗಳೂರು ಪ್ರಕ್ಷುಬ್ಧತೆಗೆ ಸಿಲುಕಿತ್ತು.
ಪೊಲೀಸರ ಗೋಲಿಬಾರ್ ಅನ್ನು ಖಂಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ “ಇದು ಉದ್ದೇಶಪೂರ್ವಕ ಗೋಲಿಬಾರ್ ಪ್ರಕರಣವಾಗಿದ್ದು, ಈ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಯಬೇಕು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು” ಎಂದು ಒತ್ತಾಯಿಸಿದ್ದರು.
ಈ ಕುರಿತು ಇಂದು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, “ಗಲಭೆ ಪೀಡಿತ ಮಂಗಳೂರಿಗೆ ನಾನು ಇಂದು ಹೊರಡುತ್ತಿದ್ದೇನೆ. ಮೊದಲು ಅಲ್ಲಿಗೆ ಹೋಗಿ ವಾಸ್ತವಾಂಶದ ಬಗ್ಗೆ ತಿಳಿದುಕೊಳ್ಳುತ್ತೇನೆ. ಹಿಂಸಾಚಾರ ಮತ್ತು ಗೋಲಿಬಾರ್ ಗೆ ಏನು ಕಾರಣ ಎಂಬ ಕುರಿತು ಮಾಹಿತಿ ಪಡೆಯುತ್ತೇನೆ. ನಂತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಇಂದು ಮಂಗಳೂರಿಗೆ ತೆರಳಲಿರುವ ಸಿಎಂ ಯಡಿಯೂರಪ್ಪ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ನಂತರ ಅಲ್ಲಿಂದ ಉಡುಪಿಗೆ ತೆರಳಿ ಪೇಜಾವರ ಶ್ರೀ ಅವರ ಆರೋಗ್ಯ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.