ಭೂ ಸೇನೆಯ ಫಿರಂಗಿ ದಾಳಿ ಶಕ್ತಿಗೆ ಮತ್ತಷ್ಟು ಬಲ

ಚಂಡೀಪುರ್ (ಒಡಿಶಾ), ಡಿ.20- ಭಾರತೀಯ ಭೂ ಸೇನೆಯ ಫಿರಂಗಿ ದಾಳಿ ಶಕ್ತಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಸುಧಾರಿತ ಪಿನಾಕಾ ಮಾರ್ಗದರ್ಶಿ ರಾಕೆಟ್ ಅಸ್ತ್ರ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಒಡಿಶಾದ ಬಾಲಸೋರ್ ಕರಾವಳಿ ಪ್ರದೇಶದ ಚಂಡೀಪುರ್‍ನ ಸಮಗ್ರ ಪರೀಕ್ಷಾರ್ಥ ವಲಯದಲ್ಲಿ ನಡೆಸಲಾದ ಆತ್ಯಾಧುನಿಕ ಪಿನಾಕಾ ಗೈಡೆಡ್ ರಾಕೆಟ್ ಸಿಸ್ಟಮ್ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ ಎಂದು ಸೇನೆ ತಿಳಿಸಿದೆ.

ರಕ್ಷಣಾ ಇಲಾಖೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‍ಡಿಒ) ಅಭಿವೃದ್ಧಿಗೊಳಿಸಿರುವ ಪಿನಾಕಾ-ಒಂದು ಆರ್ಟಿಲರಿ ಮಿಸೈಲ್ ಸಿಸ್ಟಮ್ (ಫಿರಂಗಿ ಕ್ಷಿಪಣಿ ವ್ಯವಸ್ಥೆ). ಇದು 75 ಕಿ.ಮೀ. ದೂರದಲ್ಲಿರುವ ವೈರಿ ಪ್ರದೇಶದ ಮೇಲೆ ಅತ್ಯಂತ ನಿಖರವಾಗಿ ದಾಳಿ ನಡೆಸಿ ಧ್ವಂಸಗೊಳಿಸುವ ಸಾಮಥ್ರ್ಯ ಹೊಂದಿದೆ.

ಮತ್ತಷ್ಟು ದೂರ ತಲುಪುವ ಮತ್ತು ನಿರ್ದಿಷ್ಟ ಗುರಿಯನ್ನು ಮುಟ್ಟಿ ಅದನ್ನು ಧ್ವಂಸಗೊಳಿಸುವ ಉದ್ದೇಶದಿಂದ ನಡೆಸಲಾದ ಈ ಮೇಲ್ದರ್ಜೆ ಪ್ರಯೋಗ ಯಶಸ್ವಿಯಾಗಿದೆ. ಎಲ್ಲ ಉದ್ದೇಶಗಳನ್ನು ಪಿನಾಕಾ ರಾಕೆಟ್ ವ್ಯವಸ್ಥೆ ಪೂರ್ಣಗೊಳಿಸಿದೆ ಎಂದು ಸೇನೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ