ನವದೆಹಲಿ, ಡಿ.20- ಪಶು ವೈದ್ಯ ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಸೈಬರಾಬಾದ್ ಪೋಲೀಸ್ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ನಾಲ್ವರು ಆರೋಪಿಗಳ ಕುಟುಂಬದವರು ಈ ಘಟನೆ ಸಂಬಂಧ ಸಿಬಿಐ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಅಲ್ಲದೆ, ತಮ್ಮ ಪ್ರತಿಯೊಂದು ಕುಟುಂಬಕ್ಕೂ ತಲಾ 50 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಆರೋಪಿಗಳ ಸಂಬಂಧಿಕರು ಕೋರಿದ್ದಾರೆ.
ಎನ್ಕೌಂಟರ್ ಪ್ರಕರಣದ ತನಿಖೆಯನ್ನು ಈಗಾಗಲೇ ನಿವೃತ್ತಿ ನ್ಯಾಯಾಧೀಶ ವಿ.ಎಸ್.ಸಿರ್ಪುರ್ಕರ್ ನೇತೃತ್ವದ ತ್ರಿಸದಸ್ಯ ನ್ಯಾಯಾಂಗ ತನಿಖೆಗೆ ವಹಿಸಲಾಗಿದ್ದು, 6 ತಿಂಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದ ನಾಲ್ವರು ಕಾಮುಕರು, ನಂತರ ಆಕೆಯನ್ನು ಹತ್ಯೆ ಮಾಡಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.
ಘಟನೆ ಬಳಿಕ ಕಾಮುಕರ ಹಂತಕರನ್ನು ಬಂಧಿಸಲಾಗಿತ್ತು. ಪೋಲೀಸರು ತನಿಖೆ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರು. ಅಲ್ಲದೆ, ಪೋಲೀಸರ ಬಳಿಯಿದ್ದ ಪಿಸ್ತೂಲ್ ಕಸಿದುಕೊಂಡು ಗುಂಡು ಹಾರಿಸಲು ಯತ್ನಿಸಿ ಕಲ್ಲು ತೂರಾಟ ನಡೆಸಿದರು. ಕೆಲವು ಪೋಲೀಸರಿಗೆ ಗಾಯಗಳಾದವು.
ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೋಲೀಸರು ಕಾಮುಕರ ಮೇಲೆ ಗುಂಡು ಹಾರಿಸಿ ಎನ್ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು. ಪೋಲೀಸರ ಈ ಕಾರ್ಯಕ್ಕೆ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.
ಆದರೆ, ಮಹಮ್ಮದ್ ಆರಿಫ್, ಶಿವ, ನವೀನ್ ಮತ್ತು ಚನ್ನಕೇಶವಲು ಕುಟುಂಬದ ಸಂಬಂಧಿಕರು ಸುಪ್ರೀಂಕೊರ್ಟ್ ಮೆಟ್ಟಿಲೇರಿ ಸಿಬಿಐ ತನಿಖೆಗೆ ಆಗ್ರಹಿಸಿ ತಲಾ ಒಂದೊಂದು ಕುಟುಂಬಕ್ಕೂ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.