ಬೆಳಗಾವಿ, ಡಿ.20- ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸತ್ಯ ಮತ್ತು ಮಿಥ್ಯಗಳ ತಿಳುವಳಿಕೆಯಿಲ್ಲದಿದ್ದರಿಂದ ಮಂಗಳೂರಿನಲ್ಲಿ ಗಲಭೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖ್, ಅಯೋಧ್ಯೆ ವಿಚಾರದಲ್ಲಿ ಗಲಭೆ ಸೃಷ್ಠಿಸಲು ವಿಪಕ್ಷಗಳು ಯತ್ನಿಸಿ ವಿಫಲವಾಗಿದ್ದವು. ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ತಪ್ಪು ಮಾಹಿತಿ ನೀಡಿ; ಜನಸಾಮಾನ್ಯರನ್ನು ಪ್ರಚೋದಿಸಿ ಗಲಭೆ ಸೃಷ್ಠಿಸುತ್ತಿವೆ ಎಂದು ಆರೋಪಿಸಿದರು.
ಗಲಭೆ ಹಿಂದೆ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿಗಳು ಸೇರಿ ಪ್ರಚೋದನೆ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದರು.
ಅಲ್ಪಸಂಖ್ಯಾತರಲ್ಲಿ ವಿಷ ಬೀಜ:
ದೇಶದ ಯಾವ ನಾಗರಿಕರ ಹಕ್ಕನ್ನು ನಾವು ಕಸಿದುಕೊಂಡಿಲ್ಲ. ಈ ಬಗ್ಗೆ ನಾವು ಚರ್ಚೆಗೆ ಸಿದ್ದರಿದ್ದೇವೆ. ಚಳವಳಿ ನೆಪದಲ್ಲಿ, ವಿರೋಧಿಸುವ ನೆಪದಲ್ಲಿ ಕೋಮುಗಲಭೆ ನಡೆಸುವ ಸಂಚು ನಡೆಸಲಾಗುತ್ತಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರಲ್ಲಿ ವಿಷದ ಬೀಜ ಬಿತ್ತಿ ಅವರನ್ನು ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹಿಂಸಾಚಾರವನ್ನು ನಮ್ಮ ಸಂವಿಧಾನ ಒಪ್ಪುವುದಿಲ್ಲ. ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿರೋದನ್ನು ನಾನು ಖಂಡಿಸುತ್ತೇನೆ ಎಂದರು.
ರಾಜ್ಯಕ್ಕೆ ಬೆಂಕಿ ಹಾಕ್ತೀವಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು. ಸಿದ್ದರಾಮಯ್ಯ ಸೇರಿದಂತೆ ಯಾವೊಬ್ಬ ಕಾಂಗ್ರೆಸ್ ಮುಖಂಡರು ಖಾದರ್ ಹೇಳಿಕೆ ಖಂಡಿಸಲಿಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹ ಖಂಡಿಸಲಿಲ್ಲ. ಮಂಗಳೂರಿನಲ್ಲಿ ನಿನ್ನೆ ಇಬ್ಬರ ಸಾವಿಗೆ ಖಾದರ್ ಮತ್ತು ಅವರ ನಾಯಕರೇ ಕಾರಣ ಎಂದು ಕಿಡಿ ಕಾರಿದರು.
ಗೋಲಿಬಾರ್ಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ:
ಪೆಟ್ರೋಲ್ ಬಾಂಬ್ ಇಟ್ಟುಕೊಂಡವರನ್ನು ಅಮಾಯಕರು ಎನ್ನಲಾಗುವುದಿಲ್ಲ ಎಂದ ಅವರು, ಯು.ಟಿ.ಖಾದರ್ ಸೇರಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಪೌರತ್ವ ನೀಡುವ ಕಾಯ್ದೆ ತಂದರೆ ಇವರ್ಯಾಕೆ ಉರಿಯಬೇಕು ಎಂದು ಪ್ರಶ್ನಿಸಿದರು.
ಈ ಕಾಯ್ದೆ ಫಿರೋಜ್ ಖಾನ್, ಯು.ಟಿ.ಖಾದರ್ ಹಕ್ಕನ್ನು ಕಿತ್ತುಕೊಂಡಿಲ್ಲ. ಹಾಗಾದರೆ ಪಾಕಿಸ್ತಾನದ ಮುಸ್ಲಿಂರಿಗಾಗಿ ಇವರು ಗಲಭೆ ಮಾಡುತ್ತಿದ್ದಾರೆಯೇ ಎಂದು ಕಿಡಿಕಾರಿದರು.
ಗೋಲಿಬಾರ್ ಮನೆಯಲ್ಲಿ ಇದ್ದವರ ಮೇಲೆ ಆಗಿಲ್ಲ. ಬ್ಯಾಗ್ನಲ್ಲಿ ಕಲ್ಲಿಟ್ಟುಕೊಂಡು, ಪೆಟ್ರೋಲ್ ಬಾಂಬ್ ಹಿಡಿದವರ ಮೇಲೆ ಗೋಲಿಬಾರ್ ಆಗಿದೆ. ಈ ಗೋಲಿಬಾರ್ಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ ಎಂದರು.
ಉದ್ಧವಠಾಕ್ರೆಗೆ ಇತಿಹಾಸ ಪ್ರಜ್ಞೆ ಇಲ್ಲ:
ಇತಿಹಾಸ ಪ್ರಜ್ಞೆ ಇಲ್ಲದ ಬೆಂಕಿ ಹಚ್ಚುವ ಮನುಷ್ಯ ಉದ್ಧವಠಾಕ್ರೆ ಎಂದು ಸಚಿವ ಸಿ. ಟಿ. ರವಿ ಕಿಡಿಕಾರಿದ್ದಾರೆ.
ರಾಜ್ಯಗಳ ಪುನರ್ ರಚನೆ ಸಂದರ್ಭ ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅವರೊಂದಿಗೆ ಸರಕಾರ ರಚಿಸಿರುವ ಠಾಕ್ರೆಗೆ ಬುದ್ಧಿ ಇಲ್ಲವೇ. ಗಡಿ ಅನ್ಯಾಯ ಆಗಿದ್ದರೆ ಕಾಂಗ್ರೆಸ್ ಸಂಬಂಧ ಕಳಚಿಕೊಂಡು ಉದ್ಧವ್ ಹೊರ ನಡೆಯಲಿ ಎಂದು ಸವಾಲು ಹಾಕಿದರು.
ಬೆಳಗಾವಿ ಸೇರಿ ರಾಜ್ಯದ ಯಾವುದೆ ನಗರದ ಬಗ್ಗೆ ಕುಚೋದ್ಯ ಮಾತನಾಡಿದರೆ ಕರ್ನಾಟಕ ಸುಮ್ಮನೆ ಇರೊಲ್ಲ ಎಂದು ಎಚ್ಚರಿಸಿದರು.