ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಹೋರಾಟಗಳು ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಶುಕ್ರವಾರ ಕೂಡ ಅನೇಕ ರಾಜ್ಯಗಳಲ್ಲಿ ಹಿಂಸಾಚಾರ ಮುಂದುವರೆದಿದ್ದು, ಉತ್ತರಪ್ರದೇಶದಲ್ಲಿಯೇ ಅತೀ ಹೆಚ್ಚು ಹಿಂಸಾಚಾರ ಸಂಭವಿಸಿದೆ.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ನಡೆಸಿರುವ ಗೋಲಿಬಾರ್’ಗೆ 9 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಉತ್ತರಪ್ರದೇಶದ ಗೋರಖಪುರ, ಸಂಭಲ್, ಭದೋಹಿ, ಬಹ್ರೈಚ್, ಫರೂಖಾಬಾದ್, ಬುಲಂದಶಹರ್, ವಾರಾಣಾಸಿ, ಫಿರೋಜಾಬಾದ್, ಕಾನ್ಪುರ, ಬಿಜ್ನೋರ್, ಮೇರಠ್ ಹಾಗೂ ಇನ್ನೂ ಅನೇಕ ಜಿಲ್ಲೆಗಳಲ್ಲಿ ವ್ಯಾಪಕ ಗಲಭೆ ಸೃಷ್ಠಿಯಾಗಿದೆ.
ಈ ಪೈಕಿ ಬಿಜ್ನೋರ್, ಕಾನ್ಪುರ, ಸಂಭಲ್, ಫಿರೋಜಾಬಾದ್, ಮೇರಠ್ ನಲ್ಲಿ ಸಂಭವಿಸಿದ ಗಲಭೆಗಳಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಬಿಜ್ನೋರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಉಳಿದ ಕಡೆ ತಲಾ ಒಬ್ಬರು ಅಸುನೀಗಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇವರಲ್ಲಿ 50 ಮಂದಿ ಪೊಲೀಸರೂ ಇದ್ದಾರೆ.
ಅನೇಕ ಕಡೆ ಕಲ್ಲು ತೂರಾಟ, ವಾಹನಗಳು ಹಾಗೂ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ, ಅಶ್ರುವಾಯು ನಡೆಸಿದ್ದಾರೆ. ಗೊನೆಗೆ ಗೋಲಿಬಾರ್ ಕೂಡ ಮಾಡಿದ್ದಾರೆ. ಉತ್ತರಪ್ರೇದಶದಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆಯೇ ರಾಜ್ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ವದಂತಿಯ ಮೂಲವಾಗಿರುವ ಇಂಟರ್ನೆಟ್ ಸೌಲಭ್ಯಗಳನ್ನೂ ಅನೇಕ ಭಾಗಗಳಲ್ಲಿ ಬ್ಲಾಕ್ ಮಾಡಲಾಗಿದೆ.