ಬೆಂಗಳೂರು,ಡಿ.21-ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯಿಂದಾಗಿ ದೇಶದ ಯಾವುದೇ ನಾಗರಿಕರಿಗೂ ತೊಂದರೆಯಾಗುವುದಿಲ್ಲ. ಪ್ರತಿಪಕ್ಷಗಳು ಅನಗತ್ಯವಾಗಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಈಗ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆ ಜಾರಿಯಾಗುವುದರಿಂದ ಮುಸ್ಲಿಮರಿಗಾಗಲಿ ಇತರೆ ಯಾವುದೇ ಸಮುದಾಯದವರಿಗೂ ಕಿಂಚಿತ್ತೂ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಿದೆ. ಆದರೂ ಹಲವು ರಾಜಕೀಯ ಪಕ್ಷಗಳು ಹೋರಾಟಕ್ಕೆ ಕುಮ್ಮಕ್ಕು ಕೊಡುವ ಷಡ್ಯಂತರ ಮಾಡುತ್ತಿವೆ. ಕಾಯ್ದೆ ಬಗ್ಗೆ ಯಾವುದೇ ಆತಂಕಪಡಬಾರದೆಂದು ಮನವಿ ಮಾಡಿದರು.
ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಮಾಧುಸ್ವಾಮಿ, ಪೌರತ್ವ ಕಾಯ್ದೆ ಜಾರಿ ಮಾಡುವುದರಿಂದ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಸಂವಿಧಾನ ಬದ್ಧವಾದ ಕೆಲಸವನ್ನೇ ಮಾಡಿದ್ದೇವೆ. ಯಾವ ಧರ್ಮವನ್ನು ಸಹ ಇಬ್ಭಾಗ ಮಾಡಿಲ್ಲ.
ಬೇರೆ ಬೇರೆ ರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸಿ ಇಲ್ಲಿಗೆ ಬಂದವರು ಪೌರತ್ವ ಸಿಗುವುದಿಲ್ಲ ಎಂಬ ಆತಂಕಕ್ಕೊಳಗಾಗಿದ್ದಾರೆ. ಅಂಥವರಿಗೂ ದೇಶದ ನಾಗರಿಕತ್ವ ಕೊಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದವರಿಗೆ ಕೆಲವು ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ಅವರಿಗಿದೆ. ಅಂಥವರಿಗೆ ಕೆಲವರು ಪ್ರತಿಭಟನೆ ನಡೆಸಲು ಕುಮ್ಮಕ್ಕು ಕೊಡುತ್ತಿದ್ದಾರೆ.
ಈಗ ಮುಸ್ಲಿಮರನ್ನು ಪಟ್ಟಿಯಲ್ಲಿ ಯಾಕೆ ಸೇರಿಸಿಲ್ಲ ಎಂದು ಪ್ರಶ್ನಿಸುತ್ತಿರುವವರು ಅಂದು ದೇಶ ಇಬ್ಭಾಗವಾಗಿ ಮೂರು ರಾಷ್ಟ್ರಗಳಲ್ಲಿ ಆರು ಧರ್ಮೀಯರು ಕಿರುಕುಳ ಅನುಭವಿಸುತ್ತಿದ್ದಾಗ ನೀವು ಏಕೆ ಪ್ರಶ್ನಿಸಲಿಲ್ಲ ಎಂದು ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡರು.
ಸಾಮಾನ್ಯವಾದ ಪರಿಸ್ಥಿತಿಯಲ್ಲಿ ಕಾನೂನು ಬದ್ಧವಾಗಿ ಮೂರು ರಾಷ್ಟ್ರಗಳಿಂದ ಬಂದು ನೆಲೆಸಿರುವ ಜನರಿಗೆ ಸಹಜ ರೀತಿಯಲ್ಲೇ ಪೌರತ್ವ ಸಿಗುತ್ತದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ 10 ಮಿಲಿಯನ್ ಜನರು ನಿರಾಶ್ರಿತರಾಗಿದ್ದರು. ಅಂದು ಮಾನವ ಹಕ್ಕುಗಳ ಹೋರಾಟಗಾರರು ಎಲ್ಲಿ ಹೋಗಿದ್ದರು ಎಂದು ಮಾಧುಸ್ವಾಮಿ ಪ್ರಶ್ನಿಸಿದರು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಬದುಕಲು ಸಾಧ್ಯವೇ ಇಲ್ಲ ಎಂದು ಭಾರತಕ್ಕೆ ವಲಸೆ ಬಂದಿದ್ದಾರೆ. ಅಂಥವರಿಗೆ ಪೌರತ್ವ ನೀಡಬೇಕೆಂದರೆ ಕೇಂದ್ರ ಸರ್ಕಾರ ಕೆಲವು ನಿಬಂಧನೆಗಳನ್ನು ವಿಧಿಸಿದೆ. ಎಲ್ಲವೂ ಸರಿಹೋಗುತ್ತಿರುವಾಗಲೇ ಕೆಲವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಈಶಾನ್ಯ ರಾಜ್ಯಗಳಲ್ಲಿ ಈ ಕಾಯ್ದೆ ತಕ್ಷಣವೇ ಜಾರಿಯಾಗುವುದಿಲ್ಲ. ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ನಂತರ ಎನ್‍ಆರ್‍ಸಿ ಆರಂಭವಾಗುತ್ತದೆ. ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಹಾಜರುಪಡಿಸಿದರೆ ಯಾವ ಸಮಸ್ಯೆಯೂ ಬರುವುದಿಲ್ಲ. ಮೊದಲು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.
ಈ ಕಾಯ್ದೆ ಯುಪಿಎ ಸರ್ಕಾರದಲ್ಲಿ ಜಾರಿ ಮಾಡಲು ಉದ್ದೇಶಿಸಲಾಗಿತ್ತು. ಅದನ್ನು ಕೆಲವು ಮಾರ್ಪಡು ಮಾಡಿ ಕೇಂದ್ರ ಸರ್ಕಾರ ಜಾರಿ ಮಾಡಿದೆ. ಕೆಲವರು ದೇಶವೇ ಬಿದ್ದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಲ್ಲಿ ನಡೆದ ದೌರ್ಜನ್ಯಕ್ಕೆ ಇಲ್ಲಿ ನಾವು ನ್ಯಾಯ ಒದಗಿಸಿದ್ದೇವೆ. ಆದರೆ ಅಂಥವರಿಗೂ ಪೌರತ್ವ ಕೊಡಿ ಎಂದು ಆಗ್ರಹ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಅಮೇರಿಕದಂತಹ ದೇಶಗಳಲ್ಲೇ ಇಂದು ವಲಸಿಗರನ್ನು ಗಡಿಪಾರು ಮಾಡುತ್ತಿದ್ದಾರೆ. ನಾವು ನ್ಯಾಯಬದ್ಧವಾಗಿ ಪೌರತ್ವ ನೋಂದಣಿ ಮಾಡಿ ನಂತರ ಯಾರು ಅರ್ಹರು ಇರುವುದಿಲ್ಲವೋ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ. ಆದರೆ ಪ್ರತಿ ಪಕ್ಷದವರು ಕೇವಲ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಈ ಮಸೂದೆ ಜಾರಿ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಜನತೆ ಕಿವಿಗೊಡಬಾರದೆಂದು ಮನವಿ ಮಾಡಿದರು.
ಮಸೂದೆಯನ್ನು ಕೇಂದ್ರ ಸರ್ಕಾರ ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಜಾರಿ ಮಾಡಿಲ್ಲ. 2014ಕ್ಕೂ ಮುಂಚೆ ಬಂದವರಿಗೆ ಪೌರತ್ವ ಕೊಡಲು ಸಿಎಎ ಕಾಯ್ದೆ ಜಾರಿ ಮಾಡಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೂ ಇದರಿಂದ ನ್ಯಾಯ ಸಿಗಲಿದೆ ಎಂದು ಹೇಳಿದರು.
ರೋಹಿಂಗ್ಯ ಮುಸ್ಲಿಮರಿಗೆ ಚೀನಾಗಡಿ ಕೇವಲ 400 ಕಿ.ಮೀ ದೂರವಿತ್ತು. ಭಾರತದ ಗಡಿ 2700 ಕಿ.ಮೀ ದೂರವಿದ್ದರೂ ನಮ್ಮ ದೇಶಕ್ಕೆ ವಲಸೆ ಬಂದರು.
ಚೀನಾದಲ್ಲಿ ನುಸುಳುಕೋರರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳದ ಪ್ರತಿಪಕ್ಷದವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಅಕ್ಕಪಕ್ಕದ ದೇಶದ ನಾಗರಿಕರು ನಮ್ಮ ದೇಶಕ್ಕೆ ವಲಸೆ ಬಂದಿದ್ದಾರೆ. ಆ ದೇಶಗಳು ಧರ್ಮಾಧಾರಿತವಾಗಿವೆ. ಪಾಕ್ ಮತ್ತು ಬಾಂಗ್ಲಾದಲ್ಲಿ ಶೇ.25ರಷ್ಟು ಅಲ್ಪಸಂಖ್ಯಾತರಿದ್ದರು. ಈಗ ಅಲ್ಲಿ ಶೇ.3.6ರಷ್ಟು ಮಾತ್ರ ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಆ ರಾಷ್ಟ್ರಗಳಲ್ಲಿ ಬದುಕುವ ಪರಿಸ್ಥಿತಿ ಇರದ ಕಾರಣ ನಮ್ಮಲ್ಲಿಗೆ ವಲಸೆ ಬಂದಿದ್ದಾರೆ.
ಅಕ್ರಮ ಒಳನುಸುಳುಕೋರರು ಮಾತ್ರ ತಾವು ಭಾರತದ ಪೌರತ್ವವನ್ನು ಕಳೆದುಕೊಳ್ಳಬಹುದೆಂಬ ಆತಂಕದಲ್ಲಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಕೆಲವರು ಇದಕ್ಕೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಪಕ್ಷದ ಮುಖಂಡ ವಿವೇಕ್ ಸೇರಿದಂತೆ ಮತ್ತಿತರರು ಇದ್ದರು.