ಹೈದರಾಬಾದ್, ಡಿ.20- ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಭೇದಿಸಿರುವ ಆಂಧ್ರ ಪ್ರದೇಶ ಪೋಲೀಸರು ಈ ಸಂಬಂಧ ಭಾರತೀಯ ನೌಕಾಪಡೆಯ ಏಳು ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹವಾಲಾ ಮಧ್ಯವರ್ತಿಯನ್ನು ಸಹ ಸೆರೆ ಹಿಡಿಯಲಾಗಿದೆ. ಇವರೆಲ್ಲರನ್ನೂ ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಈ ಬೇಹುಗಾರಿಕೆ ಜಾಲದಲ್ಲಿ ಶಾಮೀಲಾಗಿರಬಹುದಾದ ಮತ್ತಷ್ಟು ಮಂದಿ ಬಂಧಿತರಾಗುವ ಸಾಧ್ಯತೆಯಿದೆ.
ಪಾಕಿಸ್ತಾನದ ಪರ ಗೂಢಾಚಾರಿಕೆ ನಡೆಸಲಾಗುತ್ತಿದೆ ಎಂಬ ಇತ್ತೀಚಿನ ವರದಿ ಹಿನ್ನೆಲೆಯಲ್ಲಿ ಕೇಂದ್ರೀಯ ಗುಪ್ತಚರ ದಳ ಮತ್ತು ಭಾರತೀಯ ನೌಕಾಪಡೆಯ ಬೇಹುಗಾರಿಕೆ ಘಟಕವು ಡಾಲ್ಫಿನ್ ನೋಸ್ ಎಂಬ ಕಾರ್ಯಾಚರಣೆ ನಡೆಸಿತ್ತು.
ಇದರ ಭಾಗವಾಗಿ ನೌಕಾಪಡೆಯ ಏಳು ಸಿಬ್ಬಂದಿಯನ್ನು ಮತ್ತು ಹವಾಲಾ ಆಪರೇಟರ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಉನ್ನತ ಪೋಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಬೇಹುಗಾರಿಕೆ ಜಾಲದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು, ತನಿಖೆ ಪ್ರಗತಿಯಲ್ಲಿದೆ.