ನವದೆಹಲಿ, ಡಿ.21- ನಿಷೇಧಾಜ್ಞೆ ಇದ್ದರೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರ್ಯಾಲಿ ನಡೆಸಿ ಪೋಲೀಸರ ಬಂಧನದಿಂದ ನುಣುಚಿಕೊಂಡಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಅಜಾದ್ ಮತ್ತು 40 ಕಾರ್ಯಕರ್ತರನ್ನು ಪೋಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.
ಆಜಾದ್ ನೇತೃತ್ವದಲ್ಲಿ ನಿನ್ನೆ ಸಂಜೆ ಭೀಮ್ ಆರ್ಮಿ ಕಾರ್ಯಕರ್ತರು ದೆಹಲಿಯ ಜಾಮಾ ಮಸೀದಿಯಿಂದ ಜಂತರ್ ಮಂತರ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಿನ್ನೆ ಮಧ್ಯಾಹ್ನವೇ ಪ್ರತಿಭಟನೆ ನಡೆಸಲು ಸಂಘಟನೆ ಉದ್ದೇಶಿಸಿತ್ತಾದರೂ, ಪೋಲೀಸರು ಅನುಮತಿ ನಿರಾಕರಿಸಿದ್ದರು. ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಲೆಕ್ಕಿಸದೇ ನಿನ್ನೆ ಅಜಾದ್ ಮತ್ತು ಇತರ ಕಾರ್ಯಕರ್ತರು ರ್ಯಾಲಿ ನಡೆಸಿದ್ದರು.
ಅಜಾದ್ ಬಂಧನಕ್ಕೆ ಪೋಲೀಸರು ಯತ್ನಿಸಿದಾಗ ಅವರು ಮಸೀದಿಯೊಳಗೆ ಸೇರಿಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಅವರ ಬಂಧನಕ್ಕಾಗಿ ಪೋಲೀಸರು ಮುಂದಾದಾಗ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದರು. ಕೆಲಕಾಲದ ಕಣ್ಣಾಮುಚ್ಚಾಲೆ ಬಳಿಕ ಜಾಮಾ ಮಸೀದಿ ಹೊರಗೆ ಅಜಾದ್ ಮತ್ತು ಅವರ 40ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ಹಳೆ ದೆಹಲಿಯ ದರಿಯಾಗಂಜ್ನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಭುಗಿಲೆದ್ದ ಪ್ರತಿಭಟನೆ ಸಂಬಂಧಿ 15 ಜನರನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.