ಬೆಂಗಳೂರು, ಡಿ.20-ಪ್ರತಿಭಟನೆ ಮಾಡುವುದು ಸಂವಿಧಾನಬದ್ಧ ಜನರ ಹಕ್ಕಾಗಿದ್ದು, ನಿಷೇಧಾಜ್ಞೆಯನ್ನು (144 ಸೆಕ್ಷನ್) ವಾಪಸ್ ಪಡೆಯಬೇಕೆಂದು ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಸಮಿತಿ ಶಾಸಕರ ಭವನದಲ್ಲಿಂದು ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಷೇಧಾಜ್ಞೆ ವಾಪಸ್ ಪಡೆಯಲು ಮುಖ್ಯಮಂತ್ರಿ, ಗೃಹ ಸಚಿವರು ಕ್ರಮಕೈಗೊಳ್ಳಬೇಕೆಂದು ಹೇಳಿದರು.
ನಿಷೇಧಾಜ್ಞೆ ಜಾರಿಗೊಳಿಸಿ ಇಂಟರ್ನೆಟ್ ಸ್ಥಗಿತಗೊಳಿಸಿ ಪ್ರತಿಭಟನೆ ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಹತ್ತಿಕ್ಕುವಂತಹ ಪ್ರಯತ್ನ ನಡೆದಾಗಲೆಲ್ಲ ಜನಾಂದೋಲನೆ ಹೆಚ್ಚಾಗಿರುವುದನ್ನು ಇತಿಹಾಸದಿಂದ ತಿಳಿಯಬಹುದಾಗಿದೆ ಎಂದು ತಿಳಿಸಿದರು.
ಸಂವಿಧಾನದ 19ನೇ ಕಲಂ ಜಾರಿಯಲ್ಲಿದೆಯೇ ಎಂಬ ಸಂಶಯ ಮೂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವುದನ್ನು ಹತ್ತಿಕ್ಕಲು ನಿಷೇಧಾಜ್ಞೆ ಜಾರಿ ಮಾಡುವ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೇಶದಲ್ಲಿ ಸಂವಿಧಾನ ಇದೆಯೇ ಇಲ್ಲವೇ ಎಂಬ ಗಾಢವಾದ ಸಂಶಯ ಮೂಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನಬದ್ಧವಾಗಿದೆಯೇ ಇಲ್ಲವೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಪ್ರತಿಭಟನೆ ಮಾಡುವ ಹಕ್ಕನ್ನು ಕಸಿದುಕೊಳ್ಳುವುದನ್ನು ಖಂಡಿಸುವವರಲ್ಲಿ ತಾವು ಕೂಡ ಒಬ್ಬರು. ಎಂದು ಹೇಳಿದರು.
ಪ್ರತಿಭಟಿಸುವ ಪ್ರಜೆಗಳ ಹಕ್ಕು ಕಸಿದಿರುವುದು ಸಂವಿಧಾನದ ಪೀಠದ ತೀರ್ಪಿಗೆ ವಿರುದ್ದವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾತ್ಯತೀತ ಮೂಲಭೂತ ತತ್ವಕ್ಕೆ ವಿರುದ್ಧವಾಗಿದೆ. ಶ್ರೀಲಂಕಾದಲ್ಲೂ 80 ಲಕ್ಷ ಹಿಂದೂಗಳೀದ್ದಾರೆ. ಅಲ್ಲೂ ಹೋರಾಟ ನಡೆಯುತ್ತಲೇ ಇದೆ. ಅವರ ಪರವಾಗಿ ಯಾವುದೇ ಪ್ರಸ್ತಾಪವಿಲ್ಲ.
ಶಾಂತಿಯುತ ಧರಣಿ, ಪ್ರತಿಭಟನೆ ಮಾಡಲು ಸಂವಿಧಾನ 19ನೇ ಕಲಂನಲ್ಲಿ ಅವಕಾಶವಿದೆ ಎಂದು ಗೋಪಾಲಗೌಡ ತಿಳಿಸಿದರು.
ಚಿಂತಕ ಕೆ.ಪ್ರಕಾಶ್, ಪಲ್ಲವಿ ಇಡಿಯೂರ, ಮಹೇಂದ್ರಕುಮಾರ್, ಜಿ.ಎನ್.ನಾಗರಾಜ್, ಎಸ್ಎಫ್ಐ ರಾಜ್ಯ ಸಮಿತಿ ಅಧ್ಯಕ್ಷ ವಿ.ಅಂಬರೀಶ್,ï ಕಾರ್ಯದರ್ಶಿ ಗುರುರಾಜ್ ದೇಸಾಯಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.