ಬೂದಿಮುಚ್ಚಿದ ಕೆಂಡದಂತಿರುವ ಮಂಗಳೂರಿನ ಪರಿಸ್ಥಿತಿ

ಬೆಂಗಳೂರು,ಡಿ.20- ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ನಡೆದು ಗೋಲಿಬಾರ್‍ನಲ್ಲಿ ಇಬ್ಬರು ಬಲಿಯಾಗಿ ಕಫ್ರ್ಯೂ ವಿಧಿಸಿರುವ ಮಂಗಳೂರಿನಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.

ಇಂದು ಬೆಳಗ್ಗೆ ಉಪ್ಪಿನಂಗಡಿ ಬಳಿ ಕಿಡಿಗೇಡಿಗಳು ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಧರ್ಮಸ್ಥಳದಿಂದ ಮಡಿಕೇರಿಗೆ ಬರುತ್ತಿದ್ದ ಬಸ್ ಮೇಲೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರಿನ ಡಿಪೋದಿಂದ ಹೊರಡಲಿದ್ದ ಎಲ್ಲ ಸರ್ಕಾರಿ ಬಸ್‍ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಮತ್ತಿತರೆಡೆ ಪೋಲೀಸರ ಭದ್ರತೆ ಹೆಚ್ಚಿಸಲಾಗಿದೆ.

ನಿನ್ನೆಯ ಹಿಂಸಾಚಾರದಲ್ಲಿ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಾಜಿ ಸಚಿವ ಯು.ಟಿ.ಖಾದರ್ ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಗೋಲಿಬಾರ್‍ನಿಂದ ಇಬ್ಬರು ಮೃತಪಟ್ಟ ಘಟನೆ ಖಂಡಿಸಿ ಇತ್ತ ಕೊಡಗಿನ ನೆಲ್ಯಾಹುದುಕೆರೆ ಮತ್ತು ಸಿದ್ದಾಪುರ ಗ್ರಾಮಗಳಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಗಿದೆ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲುನಲ್ಲೂ ಕೂಡ ಪ್ರತಿಭಟನೆ ನಡೆಸಲಾಗಿದೆ. ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಗೋಲಿಬಾರ್‍ನಲ್ಲಿ ಮೃತಪಟ್ಟವರ ಶವಗಳನ್ನು ಇಟ್ಟಿರುವ ವೆನ್ಲಾಕ್ ಆಸ್ಪತ್ರೆ ಬಳಿ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಕೇರಳದಿಂದ ವರದಿಗೆಂದು ಬಂದ ಸುಮಾರು 50 ಮಂದಿ ಪತ್ರಕರ್ತರನ್ನು ಇಂದು ಬೆಳಗ್ಗೆ ಪೋಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ಆಸ್ಪತ್ರೆ ಬಳಿ ಅನುಮಾನಾಸ್ಪದ ವರ್ತನೆ ಹಾಗೂ ಸರಿಯಾದ ದಾಖಲೆ ತೋರಿಸದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಈಗ ಅವರನ್ನು ಬಿಡುಗಡೆ ಮಾಡಿ ಕೇರಳಕ್ಕೆ ಕಳುಹಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೋಲೀಸ್ ಆಯುಕ್ತರಾದ ಪಿ.ಎಸ್ ಹರ್ಷ ಅವರ ಜೊತೆ ಮಾಜಿ ಸಚಿವ ಯು.ಟಿ.ಖಾದರ್, ಸಂಸದ ಕಟೀಲು, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ, ಜೆಡಿಎಸ್ ಮುಖಂಡ ಬಿ.ಎಂ.ಫಾರೂಖ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮಾತುಕತೆ ನಡೆಸಿದ್ದಾರೆ.

ಪ್ರಾರ್ಥನಾ ಮಂದಿರಗಳಿರುವ ಕಡೆಗಳೆಲ್ಲ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ನಿನ್ನೆ ರಾಜಧಾನಿ ಬೆಂಗಳೂರಿನಲ್ಲೂ ಪೌರತ್ವ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿದ್ದು, ಇಂದು ಕೂಡ ಪ್ರತಿಭಟನೆ ನಡೆಯುವ ಹಿನ್ನೆಲೆಯಲ್ಲಿ ನಗರದ ಟೌನ್‍ಹಾಲ್, ಮೈಸೂರು ಬ್ಯಾಂಕ್ ವೃತ್ತ ಇನ್ನಿತೆರೆಡೆ ಹೆಚ್ಚುವರಿ ಪೋಲೀಸರನ್ನು ನಿಯೋಜಿಸಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯಲು ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ, ಮಲೆನಾಡು ಭಾಗದ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಬಾಳೆಹೊನ್ನೂರು ಮುಂದೆಡೆ ಕೂಡ ಇಂದು ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಅನಾಹುತಗಳು ನಡೆಯುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಟರ್‍ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ