ಎಡ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳಿಂದ ದೇಶದ ವಿವಿಧೆಡೆ ಪ್ರತಿಭಟನೆ

ನವದೆಹಲಿ/ಪಾಟ್ನಾ, ಡಿ.19-ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಎಡ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ಇಂದು ರಾಜಧಾನಿ ನವದೆಹಲಿ ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದವು.

ಕೆಲವೆಡೆ ರಸ್ತೆ ತಡೆ, ರೈಲು ರೋಖೋ ಮತ್ತಿತರ ಅಹಿತಕರ ಘಟನೆಗಳು ಹೊರತುಪಡಿಸಿ ಪ್ರತಿಭಟನೆ ಶಾಂತಿಯುತವಾಗಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಅಸ್ಸಾಂ ಸೇರಿದಂತೆ ಈಶಾನ್ಯ ಪ್ರಾಂತ್ಯದ ರಾಜ್ಯಗಳು, ಪಶ್ಚಿಮ ಬಂಗಾಳ, ದೆಹಲಿ ಮತ್ತು ಉತ್ತರಪ್ರದೇಶಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದು ಸಾವು-ನೋವು, ಅನೇಕ ವಾಹನಗಳು ಮತ್ತು ರೈಲುಗಳಿಗೆ ಅಗ್ನಿಸ್ಪರ್ಶ, ಸಾರ್ವಜನಿಕರ ಆಸ್ತಿಗಳ ಧ್ವಂಸ ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಇಂದಿನ ಪ್ರತಿಭಟನೆ ವೇಳೆಯೂ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು.

ದೆಹಲಿಯಲ್ಲಿ ಮೆಟ್ರೋ ಬಂದ್ : ದೆಹಲಿಯಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ 14 ಮೆಟ್ರೋ ರೈಲು ನಿಲ್ದಾಣಗಳ ಆಗಮನ ಮತ್ತು ನಿರ್ಗಮನ ಗೇಟ್‍ಗಳನ್ನು ಬಂದ್ ಮಾಡಲಾಗಿದ್ದು, ಸಂಚಾರವನ್ನು ರದ್ದುಗೊಳಿಸಲಾಗಿದೆ.

ಅಲ್ಲದೇ ಕೆಂಪು ಕೋಟೆ, ಲಹೋರಿ ಗೇಟ್, ಕಾಶ್ಮೀರಿ ಗೇಟ್ ಮತ್ತು ಕೊತ್ವಾಲಿ ಪೋಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜಸೋಲಾ ವಿಹಾರ ಶಹೀನ್ ಭಾಗ್, ಮುನಿರ್ಕಾ, ಲಾಲ್ ಕೀಲಾ, ಜಾಮಾ ಮಸೀದಿ, ಚಾಂದಿನಿ ಚೌಕ್ ಮತ್ತು ವಿಶ್ವವಿದ್ಯಾಲಯದ ಗೇಟ್‍ಗಳನ್ನು ಬಂದ್ ಮಾಡಲಾಗಿದೆ.

ದೆಹಲಿಯಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಮತ್ತು ಅಲಿಗಢ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರದಿಂದ ಅನೇಕ ವಾಹನಗಳು ಬೆಂಕಿಗಾಹುತಿಯಾಗಿದ್ದವು. ಆನಂತರ ಪೋಲೀಸ್ ಬಲ ಪ್ರಯೋಗದಿಂದ ಅನೇಕರು ಗಾಯಗೊಂಡಿದ್ದರು. ಈ ಘಟನೆ ಸಂಬಂಧ ಹಲವು ವಿದ್ಯಾರ್ಥಿಗಳನ್ನು ಬಂದಿಸಲಾಗಿತ್ತು.

ಬಿಹಾರದಲ್ಲಿ ರೈಲು ತಡೆ : ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿಸಿ ಇಂದು ಬಿಹಾರ ಬಂದ್‍ಗೆ ಕರೆ ನೀಡಲಾಗಿದ್ದು, ರಾಜಧಾನಿ ಪಾಟ್ನಾ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆದಿವೆ.

ಪಾಟ್ನಾದಲ್ಲಿ ಅಖಿಳ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್‍ಎಫ್)ದ ಸದಸ್ಯರು ರಾಜೇಂದ್ರ ನಗರ ರೈಲು ನಿಲ್ದಾಣದಲ್ಲಿ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದರು. ದಿಬ್ರುಗಢದ ಲಹೇರಿಸಿಯಾಸರೈ ರೈಲು ನಿಲ್ದಾಣದಲ್ಲಿ ಸಿಪಿಐ-ಎಂ ಕಾರ್ಯಕರ್ತರು ರೈಲುಗಳ ಸಂಚಾರಕ್ಕೆ ತಡೆಯೊಡ್ಡಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೋಲೀಸರು ಮುಂದಾದಾಗ ಮಾತಿನ ಚಕಮಕಿ ನಡೆದು ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮಹಾರಾಷ್ಟ್ರದಲ್ಲಿ ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ಆಡಳಿತಾರೂಢ ಎನ್‍ಸಿಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ರಂಗವೊಂದನ್ನು ರಚಿಸಿದ್ದಾರೆ. ಈ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮುಂಬೈ ಸೇರಿದಂತೆ ಇತರ ನಗರಗಳಲ್ಲಿ ಹಮ್ ಭಾರತ್ ಕೆ ಲೋಗ್ ಎಂಬ ಹೆಸರಿನಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದಾರೆ.

ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಚಂಡೀಗಢದಲ್ಲಿ ಈ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ