ನವದೆಹಲಿ, ಡಿ.19-ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪಾದಿತರಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿದ್ದರೂ ಕೂಡ ಅವರ ಮರಣದಂಡನೆ ಶಿಕ್ಷೆ ಮತ್ತಷ್ಟು ವಿಳಂಬವಾಗಲಿದೆ.
ಈ ಕೃತ್ಯ ನಡೆದ ಸಂದರ್ಭದಲ್ಲಿ ನಾನು ಅಪ್ರಾಪ್ತನಾಗಿದ್ದೆ. ಆದಕಾರಣ ಬಾಲಾಪರಾಧಿ ಕಾಯ್ದೆ ಅಡಿ ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಕೋರಿ ಆಪಾದಿತರಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ದೆಹಲಿ ಹೈಕೋರ್ಟ್ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಜನವರಿ 24ಕ್ಕೆ ಮುಂದೂಡಲಾಗಿದೆ.
ಈ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ಕೂಲಂಕಷವಾಗಿ ವಿಚಾರಣೆ ನಡೆಸಿ ನ್ಯಾಯ ನಿರ್ಣಯಿಸಿದ ನಂತರವೇ ಪವನ್ ಸೇರಿದಂತೆ ಎಲ್ಲ ನಾಲ್ವರ ಗಲ್ಲು ಶಿಕ್ಷೆ ದಿನಾಂಕ ನಿಗದಿಯಾಗಲಿದೆ.
ಪವನ್ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದಿನ ತಿಂಗಳ 24ಕ್ಕೆ ಮುಂದೂಡಿಸುವುದರಿಂದ ನಾಲ್ವರು ಆಪಾದಿತರಿಗೆ ತಾತ್ಕಾಲಿಕ ಜೀವದಾನ ಲಭಿಸಿದಂತಾಗಿದೆ.
ಈ ಪ್ರಕರಣದ 3ನೇ ಅಪರಾಧಿ ಅಕ್ಷಯ್ ಕುಮಾರ್ ಸಲ್ಲಿಸಿದ್ದ ಕ್ಷಮಾದಾನ ಮರುಪರಿಶೀಲನೆ ಅರ್ಜಿಯನ್ನು ನಿನ್ನೆ ಸುಪ್ರೀಂಕೋರ್ಟ್ ತಿರಸ್ಕರಿಸುವ ಮೂಲಕ ಮರಣದಂಡನೆ ತೀರ್ಪನ್ನು ಎತ್ತಿ ಹಿಡಿದಿತ್ತು. ಗಲ್ಲು ಶಿಕ್ಷೆ ಜಾರಿಗೆ ಇದ್ದ ಕಾನೂನು ತೊಡಕು ನಿವಾರಣೆಯಾಗಿ ಮುಕೇಶ್ ಸಿಂಗ್, ಪವನ್, ಅಕ್ಷಯ್ ಮತ್ತು ನವೀನ್ನನ್ನು ನೇಣಿಗೇರಿಸುವುದು ಸನ್ನಿಹಿತವಾದರೂ ಮತ್ತೊಂದು ಅರ್ಜಿಯನ್ನು ಈಗ ವಿಚಾರಣೆ ನಡೆಸುವುದು ಅನಿವಾರ್ಯವಾಗಿದ್ದು ನಿರ್ಭಯಾ ಅತ್ಯಾಚಾರಿಗಳ ಮರಣದಂಡನೆ ಶಿಕ್ಷೆ ಮತ್ತಷ್ಟು ವಿಳಂಬವಾಗಿದೆ.