ನಿನ್ನೆ ಏಕಾಏಕಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಅಕ್ಷಮ್ಯ- ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.20- ಮಂಗಳೂರಿನ ಗೋಲಿಬಾರ್ ಘಟನೆಯ ಸಂಪೂರ್ಣ ಹೊಣೆಗಾರಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಹೊರಬೇಕಾಗಿದ್ದು, ಅವರ ಮೇಲೆ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನಾ ನಿರತರ ಮೇಲೆ ಗುಂಡು ಹಾರಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನಾಕಾರರು ಸ್ವಲ್ಪ ಕಾಲ ಧರಣಿ ನಡೆಸಿ ಕುರುಚಾಡಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದರು. ಬಳಿಕ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ಅವರ ಪ್ರತಿಭಟನೆಯನ್ನು ಸಹಿಸುವ ತಾಳ್ಮೆ ಸರ್ಕಾರಕ್ಕೆ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ನಮಗೂ ಮುಜುಗರ ವಾಗಿತ್ತು. ಆದರೆ, ಯಾರ ಮೇಲೂ ಗೋಲಿಬಾರ್ ಮಾಡಿರಲಿಲ್ಲ ಎಂದು ಹೇಳಿದರು.

ಎಲ್ಲಿಯೂ ತೀವ್ರವಾದ ಪ್ರತಿಭಟನೆಗಳು ನಡೆದಿರಲಿಲ್ಲ. ಕಾನೂನಿಗೆ ಧಕ್ಕೆಯಾಗುವಂತಹ ಸನ್ನಿವೇಶಗಳು ನಿರ್ಮಾಣವಾಗಿರಲಿಲ್ಲ. ಬಿಜೆಪಿ ನಾಯಕರೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು. ಕೊನೆಗೆ ಕಾಂಗ್ರೆಸಿಗರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಿ. ದೇಶದೆಲ್ಲೆಡೆ ಭಯಭೀತ ವಾತಾವರಣ ಸೃಷ್ಟಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹುಮತ ಇದೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ಕಾನೂನು ಜಾರಿಗೊಳಿಸಲು ಸಾಧ್ಯವಿಲ್ಲ. ದೇಶದ ಐಕ್ಯತೆ, ಸಾರ್ವಭೌಮತೆಯನ್ನು ಕಾಪಾಡುವುದು ಮುಖ್ಯ. ಪೌರತ್ವ ನಿಷೇಧ ಕಾಯ್ದೆಯ ಮೂಲಕ ಬಿಜೆಪಿ ಸಂವಿಧಾನ ಬದಲಾವಣೆಗೆ ನಾಂದಿಯಾಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮಾಜಿ ಸಚಿವ ಯು.ಟಿ.ಖಾದರ್ ನೀಡಿರುವ ಹೇಳಿಕೆಯಲ್ಲಿ ಶಾಂತಿ ಭಂಗವಾಗುವಂತಹ ಯಾವುದೇ ಅಂಶಗಳಿಲ್ಲ. ಒಂದು ವೇಳೆ ಅಂತಹ ಹೇಳಿಕೆ ನೀಡಿರುವುದು ಸಾಬೀತಾದರೆ ಸರ್ಕಾರ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ದೇಶದಲ್ಲಿ ಅಭದ್ರತೆ ಸೃಷ್ಟಿಸಿ ಜಾತಿ, ಧರ್ಮಗಳ ನಡುವೆ ವೈಷಮ್ಯ ಹುಟ್ಟುಹಾಕುತ್ತಿರುವುದು ಖಂಡನೀಯ.

ಕೂಡಲೇ ಇದನ್ನು ಸ್ಥಗಿತಗೊಳಿಸದೇ ಇದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ನಿರುದ್ಯೋಗ, ಆರ್ಥಿಕ ಕುಸಿತ, ಹಸಿವಿನ ಹೆಚ್ಚಳ ಇಂತಹ ಗಂಭೀರ ವಿಷಯಗಳನ್ನು ದಾರಿ ತಪ್ಪಿಸಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಮಂಗಳೂರು ಗೋಲಿಬಾರ್ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವ ಪುರುಷಾರ್ಥಕ್ಕಾಗಿ ಜಾರಿಗೆ ತರಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ