ಬೆಂಗಳೂರು, ಡಿ.20-ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೊಲ್ಲಬೇಕೆಂಬ ಉದ್ದೇಶದಿಂದಲೇ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವಿಡಿಯೋಗಳನ್ನು ಪ್ರದರ್ಶಿಸಿ ಪೋಲೀಸರ ಹೇಳಿಕೆ ಮತ್ತು ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗುಂಡು ಹಾರಿಸಿದ್ದರೂ ಈವರೆಗೂ ಯಾರು ಸತ್ತಿಲ್ಲ ಏಕೆ ಎಂದು ಒಬ್ಬ ಅಧಿಕಾರಿ ಪ್ರಶ್ನೆ ಮಾಡಿದರೆ, ಮತ್ತೊಬ್ಬ ಅಧಿಕಾರಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಹೊರಗೆಳೆದು ಥಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರನ್ನು ಭಯಭೀತಗೊಳಿಸುವುದೇ ಸರ್ಕಾರದ ಉದ್ದೇಶವಿದ್ದಂತೆ ಪೋಲೀಸರ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿ.. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಇಬ್ಬರನ್ನು ಕೊಲ್ಲಲಾಗಿದೆ. ಇದಕ್ಕೆ ಸರ್ಕಾರ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ 200-300 ಜನರ ಗುಂಪು ಸೇರಿ ಪ್ರತಿಭಟನೆ ನಡೆಸುತ್ತಿದ್ದಾಗ ಅವರನ್ನು ಹತ್ತಿಕ್ಕಲು ಪೋಲೀಸರಿಗೆ ಬೇರೆ ಬೇರೆ ಮಾರ್ಗಗಳಿದ್ದವು. ಎಲ್ಲವನ್ನು ಬಿಟ್ಟು ಗೋಲಿಬಾರ್ ನಡೆಸಿ ಇಬ್ಬರು ಅಮಾಯಕರನ್ನು ಕೊಲ್ಲಲಾಗಿದೆ. ಒಂದು ಕಡೆ ಯಡಿಯೂರಪ್ಪ ಪ್ರತಿಭಟನಾಕಾರರ ಮೇಲೆ ಲಾಠಿ ಎತ್ತಬೇಡಿ ಎಂದು ಹೇಳಿಕೆ ನೀಡುತ್ತಾರೆ. ಆದರೆ ಮಂಗಳೂರಿನಲ್ಲಿ ಪೋಲೀಸರು ಗುಂಡು ಹೊಡೆದಿದ್ದಾರೆ ಎಂದರು.
ವಾತಾವರಣ ನೋಡಿದರೆ ಯಡಿಯೂರಪ್ಪ ಅವರು ನಾಟಕವಾಡುತ್ತಿದ್ದಂತಿದೆ. ನಾನು ಬಹಿರಂಗವಾಗಿ ಹೇಳಬೇಕಾದ್ದನ್ನು ಹೇಳುತ್ತೇನೆ. ನೀವು ಮಾಡಬೇಕದ್ದನ್ನೇ ಮಾಡಿ ಎಂದು ಪೋಲೀಸರಿಗೆ ಸೂಚಿಸಿದಂತಿದೆ ಅಥವಾ ಪೋಲೀಸರು ಯಡಿಯೂರಪ್ಪನವರ ಮಾತನ್ನು ಕೇಳದೆ ಇರಬಹುದು ಅಥವಾ ಈ ಮೊದಲೇ ಹೇಳಿದಂತೆ ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಆಗಿರಬಹುದು ಎಂದು ವ್ಯಾಖ್ಯಾನಿಸಿದರು.
ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಇದು ವಿವಾದಿತ ಮಸೂದೆ ಎಂದು ಹೇಳಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗಿ, ಆರ್ಥಿಕ ಕುಸಿತದಂತಹ ಹಲವಾರು ಸಮಸ್ಯೆಗಳು ಜನರೆದುರು ಇರುವಾಗ ಪೌರತ್ವ ಕಾಯ್ದೆಯ ಅಗತ್ಯವಾದರೂ ಏನಿತ್ತು. ಜನರ ಗಮನ ಬೇರೆಡೆ ಸೆಳೆಯಲು ಈ ಕುತಂತ್ರ ಅನುಸರಿಸಲಾಗುತ್ತಿದೆ. ಜನ ಪ್ರತಿಭಟಿಸುವ ಹಕ್ಕು ಹೊಂದಿದ್ದಾರೆ. ಸಂವಿಧಾನದಲ್ಲಿ ಪ್ರತಿಭಟನೆಗೆ ಎಲ್ಲಿಯೂ ಅವಕಾಶ ನಿರಾಕರಿಸಿಲ್ಲ. ಸುಪ್ರೀಂಕೋರ್ಟ್ ಸಹ ಹಲವಾರು ತೀರ್ಪುಗಳಲ್ಲಿ ಪ್ರತಿಭಟನೆ ಹಕ್ಕನ್ನು ಸಮರ್ಥಿಸಿದೆ.
ಆದರೆ ಬಿಜೆಪಿ ಆಡಳಿತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ. ಪ್ರತಿಭಟನೆ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗೋಲಿಬಾರ್ ಮಾಡಿ ಗೊಬ್ಬರ ಕೇಳಿದ ರೈತರನ್ನು ಹತ್ಯೆ ಮಾಡಲಾಗಿತ್ತು. ಈಗ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೊಲ್ಲಲಾಗಿದೆ. ಈ ಘಟನೆ ಖಂಡನೀಯ. ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. ನಮಗೆ ಯಾವತ್ತೂ ಬಂದೂಕು ನೆನಪಾಗಲಿಲ್ಲ. ಬಡವರ ಅಕ್ಕಿ, ಮಕ್ಕಳ ಹಾಲು, ರೈತರ ಹಾಗೂ ಬಡವರ ಸಾಲ ನೆನಪಾದವು. ಆದರೆ ಬಿಜೆಪಿ ಫ್ಯಾಸಿಸ್ಟ್ ಮನೋಭಾವ ಹೊಂದಿದೆ. ಹೀಗಾಗಿ ಪ್ರತಿಭಟನೆ ಮಾಡುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಹಿಟ್ಲರ್, ಮುಸೊಲಿನಿ ಅವರಂತಹ ಸರ್ವಾಧಿಕಾರಿಗಳ ಧೋರಣೆ ನಡೆಯುತ್ತಿದೆ.
ಪ್ರಚೋದನೆಗಳು ರಾಜಕೀಯ ಪ್ರೇರಿತ ಅಲ್ಲ. ದೇಶಾದ್ಯಂತ ಜನ ಬಿಜೆಪಿ ಧೋರಣೆ ವಿರುದ್ಧ ದಂಗೆ ಎದ್ದಿದ್ದಾರೆ. ಮಂಗಳೂರಿನ ಗೋಲಿಬಾರ್‍ಗೆ ಸರ್ಕಾರ ಕಾರಣವೇ ಹೊರತು ಮಾಜಿ ಸಚಿವ ಯು.ಟಿ.ಖಾದರ್ ಅಲ್ಲ. ಬಿಜೆಪಿ ಹಿಂಸಾಚಾರವನ್ನು ಪ್ರಚೋದಿಸುವ ಪಕ್ಷ. ಕಾಂಗ್ರೆಸ್ ಎಂದಿಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ಹೇಳಿದರು.