ಜಮ್ಮು, ಡಿ.19- ಜಮ್ಮು ಮತ್ತು ಕಾಶ್ಮೀರದ ಇಂಡೋ-ಪಾಕ್ ಗಡಿ ಪ್ರದೇಶದಲ್ಲಿ ಹಠಾತ್ ಸಮರ ಸದೃಶ ವಾತಾವರಣ ಸೃಷ್ಟಿಯಾಗಿದೆ.
ಭಾರತೀಯ ಸೇನಾ ಪಡೆಗಳು ಗಡಿ ನಿಯಂತ್ರಣಾ ರೇಖೆ (ಎಲ್ಒಸಿ)ಬಳಿ ಐದು ಸ್ಥಳಗಳಲ್ಲಿ ತಂತಿ ಬೇಲಿಗಳನ್ನು ತೆಗೆದು ಹಾಕಿದ್ದು, ಭಾರೀ ಸಂಖ್ಯೆಯ ಟ್ಯಾಂಕ್ಗಳು ಮತ್ತು ಆರ್ಟಿಲರಿ ಗನ್ಗಳನ್ನು ಅಲ್ಲಿ ನಿಯೋಜಿಸಿದೆ.
ಗಡಿಯಾಚೆಯಿಂದ ಯಾವುದೇ ರೀತಿಯಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿರುವುದರಿಂದ ಆ ಪ್ರದೇಶದಲ್ಲಿ ಯುದ್ಧ ದಂತಹ ವಾತಾವರಣ ನಿರ್ಮಾಣವಾಗಿದೆ.
ಭಾರತೀಯ ಸೇನಾ ಪಡೆಗಳು ಗಡಿ ಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ನಿಯೋಜನೆಗೊಂಡಿರುವುದರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರು ಹೆದರಿ ಕಂಗಾಲಾಗಿದ್ದಾರೆ. ಭಾರತೀಯ ಸೇನೆಯ ಈ ಹಠಾತ್ ನಡೆಯಿಂದ ಪಾಕಿಸ್ತಾನ ಸೇನೆ ಕೂಡ ಬೆಚ್ಚಿಬಿದ್ದಿದೆ.
ಕಳೆದ ಕೆಲವು ದಿನಗಳಿಂದ ಗಡಿ ನಿಯಂತ್ರಣಾ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ವಿರೋಧಿಸಿ ಅಪ್ರಚೋದಿತ ದಾಳಿಗಳನ್ನು ಮುಂದುವರೆಸಿರುವುದರಿಂದ ಪಾಕ್ ಯೋಧರಿಗೆ ಬಿಸಿ ಮುಟ್ಟಿಸಲು ಭಾರತೀಯ ಸೇನೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಉನ್ನತ ಸೇನಾ ಮೂಲಗಳು ತಿಳಿಸಿವೆ. ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.