ಬೆಂಗಳೂರು,ಡಿ.17-ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೈ ಹಾಕಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಉಪಮುಖ್ಯಮಂತ್ರಿ ಹುದ್ದೆ ಸವಾಲಾಗಿ ಪರಿಣಮಿಸಿದೆ.
ಒಂದೆಡೆ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಶಾಸಕರ ಒತ್ತಡ ಇನ್ನೊಂದೆಡೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೆಲವರು ಪಟ್ಟು ಹಿಡಿದಿರುವುದು ಬಿಎಸ್ವೈ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ಬೆಳವಣಿಗೆಯ ನಡುವೆಯೇ ಕೆಲ ಸಚಿವರು ತಮಗೆ ಪ್ರಬಲ ಖಾತೆಗಳನ್ನೇ ನೀಡಬೇಕೆಂದು ಪಟ್ಟು ಹಿಡಿದು ಕುಳಿತಿರುವುದು ಸಾಕಪ್ಪ.. ಸಾಕು…ಸಿಎಂ ಕುರ್ಚಿ ಎನ್ನುವಂತಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಲೇಬೇಕೆಂದು ಅವರ ಆಪ್ತ ಶಾಸಕರಾದ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಒತ್ತಡ ಹಾಕಿದ್ದಾರೆ.
ವಾಲ್ಮೀಕಿ ಸಮುದಾಯ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಪರಿಣಾಮವೇ ಅಭ್ಯರ್ಥಿಗಳು ಗೆಲ್ಲಲು ಕಾರಣವಾಯಿತು.
2018ರ ಚುನಾವಣೆಯಲ್ಲಿ ಶ್ರೀರಾಮುಲು ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರಿಂದ ವಾಲ್ಮೀಕಿ ಸಮುದಾಯ ಮತ್ತು ಅವರ ಅಭಿಮಾನಿಗಳು ಬಿಜೆಪಿ ಬೆಂಬಲಕ್ಕೆ ನಿಂತರು.
ಈಗ ಮಾತಿಗೆ ತಪ್ಪಿದರೆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.
ಸೋಮಶೇಖರ ರೆಡ್ಡಿ ಧವಳಗಿರಿ ನಿವಾಸಕ್ಕೆ ಬಂದು ಸಿಎಂ ಜೊತೆ ಮಾತುಕತೆ ನಡೆಸಿ ನಿರ್ಗಮಿಸಿದ ಬೆನ್ನಲ್ಲೇ ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿ ಆಗಮಿಸಿದರು.
ನನಗೆ ಸಂಪುಟ ವಿಸ್ತರಣೆ ವೇಳೆ ಬೃಹತ್ ನೀರಾವರಿ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ನಿಮ್ಮ ಜೊತೆ ನಡೆಸಿರುವ ಮಾತುಕತೆಯಂತೆ ನಡೆದುಕೊಳ್ಳಬೇಕೆಂದು ಕೋರಿದ್ದಾರೆ.
ನನ್ನನ್ನು ಉಪಮುಖ್ಯಮಂತ್ರಿ ಮಾಡುವುದರ ಜೊತೆಗೆ ಬೃಹತ್ ನೀರಾವರಿ ಸಚಿವರನ್ನಾಗಿ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಬೆಳಗಾವಿಯ ಮೂರು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿದೆ.
ತೀವ್ರ ಪೈಪೋಟಿ ನಡುವೆಯೂ ನಾವು ಮೂವರು ಅಭ್ಯರ್ಥಿಗಳು ಗೆದ್ದಿದ್ದೇವೆ. ಹೀಗಾಗಿ ನನ್ನನ್ನು ಡಿಸಿಎಂ ಮಾಡಲೇಬೇಕೆಂದು ಪಟ್ಟು ಹಿಡಿದರು.
ಸಿಎಂ ಮನೆಗೆ ದೌಡಾಯಿಸಿದ ಸವದಿ:
ಹೀಗೆ ಒಂದೇ ಸಮುದಾಯದ ಇಬ್ಬರು ಪ್ರಭಾವಿ ನಾಯಕರಾದ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ನಡುವೆ ಡಿಸಿಎಂ ಸ್ಥಾನಕ್ಕೆ ಪೈಪೋಟಿ ಉಂಟಾಗಿದ್ದರೆ, ಮತ್ತೊಂದೆಡೆ ಉಪಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸವದಿ ಹರಸಾಹಸ ನಡೆಸುತ್ತಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ನವದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿದ್ದ ಸವದಿ ಇಂದು ಸಿಎಂ ಅವರ ನಿವಾಸಕ್ಕೆ ಆಗಮಿಸಿ 10ಕ್ಕೂ ಹೆಚ್ಚು ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಅಥಣಿ ಮತ್ತು ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಅವರುಗಳನ್ನು ಗೆಲ್ಲಿಸಿದರೆ ಲಕ್ಷ್ಮಣ್ ಸವದಿ ಸ್ಥಾನ ಮುಂದಿನ ಮೂರು ವರ್ಷಗಳ ಕಾಲ ಆಬಾಧಿತ ಎಂದು ಖುದ್ದು ಯಡಿಯೂರಪ್ಪನವರೇ ಕ್ಷೇತ್ರದ ಜನತೆಗೆ ಆಶ್ವಾಸನೆ ಕೊಟ್ಟಿದ್ದರು.
ಇದೀಗ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಡಿಸಿಎಂ ಹುದ್ದೆಗೆ ಪೈಪೋಟಿಗಿಳಿದಿರುವುದರಿಂದ ತಮಗೆ ಡಿಸಿಎಂ ಸ್ಥಾನ ಕೈ ತಪ್ಪಬಹುದೆಂಬ ಭೀತಿ ಸವದಿಗೆ ಆವರಿಸಿದೆ.
ಹೀಗಾಗಿ ನಿನ್ನೆ ರಾತ್ರಿ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಲಕ್ಷ್ಮಣ್ ಸವದಿ ಇಂದು ಬೆಳಗ್ಗೆ ಸಿಎಂ ಅವರನ್ನು ಭೇಟಿಯಾಗಿ ಸಂಪುಟದಿಂದ ಕೈಬಿಡದಂತೆ ಮನವಿ ಮಾಡಿಕೊಂಡರೆಂದು ತಿಳಿದುಬಂದಿದೆ.
ಇದೀಗ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಪಡೆಯಲು ಒಂದು ಕಡೆಯಾದರೆ ಮತ್ತೊಂದು ಕಡೆ ಉಪಮುಖ್ಯಮಂತ್ರಿ, ಇನ್ನೊಂದು ಕಡೆ ಪ್ರಬಲ ಖಾತೆಗಳಿಗೆ ಲಾಬಿ ಆರಂಭವಾಗಿರುವುದು ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಕುರ್ಚಿ ಮುಳ್ಳಿನ ಗದ್ದುಗೆಯಾಗಿ ಪರಿಣಮಿಸಿದೆ.