ಬೆಂಗಳೂರು,ಡಿ.17- ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ವಿಜೇತರಾಗಿದ್ದ ನೂತನ ಶಾಸಕರು ಭಾನುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೂತನ ಶಾಸಕರಿಗೆ ಅಧಿಕಾರ ಗೌಪ್ಯತೆಯನ್ನು ಬೋಧಿಸುವರು.
ಬಿಜೆಪಿಯ 12, ಇಬ್ಬರು ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಶಾಸಕ ಸೇರಿದಂತೆ ಒಟ್ಟು 15 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸುವರು.
ಎಸ್.ಟಿ.ಸೋಮಶೇಖರ್(ಯಶವಂತಪುರ),ಕೆ.ಗೋಪಾಲಯ್ಯ( ಮಹಾಲಕ್ಷ್ಮಿಲೇಔಟ್), ಭೆರತಿ ಬಸವರಾಜ್(ಕೆ.ಆರ್.ಪುರಂ), ರಿಜ್ವಾನ್ ಅರ್ಷದ್(ಶಿವಾಜಿನಗರ), ಶರತ್ ಬಚ್ಚೇಗೌಡ(ಹೊಸಕೋಟೆ) ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ), ಕೆ.ಸಿ.ನಾರಾಯಣಗೌಡ(ಕೆ.ಆರ್.ಪೇಟೆ) ಎಚ್.ಪಿ.ಮಂಜುನಾಥ್( ಹುಣಸೂರು), ಅರುಣ್ ಪೂಜಾರ್(ರಾಣೆಬೆನ್ನೂರು), ಬಿ.ಸಿ.ಪಾಟೀಲ್(ಹಿರೇಕೆರೂರು), ಆನಂದ್ ಸಿಂಗ್(ವಿಜಯನಗರ), ರಮೇಶ್ ಜಾರಕಿಹೊಳಿ(ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ) ಹಾಗೂ ಶ್ರೀಮಂತ್ ಪಾಟೀಲ್(ಕಾಗವಾಡ) ಅವರು ಶಾಸಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 2 ಮತ್ತು ಒಬ್ಬ ಪಕ್ಷೇತರ ಶಾಸಕರು ವಿಜೇತರಾಗಿದ್ದರು.
ಕಳೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ 17 ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಂದಿನ ಸ್ಪೀಕರ್ ಕೆ.ರಮೇಶ್ಕುಮಾರ್ ಅವರು ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಿ ಈ ವಿಧಾನಸಭೆಯ ಅವಧಿ ಮುಗಿಯುವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಿದ್ದರು.
ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲಾಗಿತ್ತು. ಸುದೀರ್ಘ ವಾದ-ವಿವಾದ ನಡೆದ ನಂತರ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಸ್ಪೀಕರ್ ಅವರ ಅನರ್ಹತೆಯ ಆದೇಶವನ್ನು ಎತ್ತಿ ಹಿಡಿದು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತ್ತು.
ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಡಿ.5ರಂದು ಉಪಚುನಾವಣೆ ನಡೆದು ಡಿಸೆಂಬರ್ 9ರಂದು ಫಲಿತಾಂಶ ಪ್ರಕಟಗೊಂಡಿತ್ತು. 12 ಕ್ಷೇತ್ರಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ್ದರಿಂದ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸದ್ಯ 117 ಸದಸ್ಯರ ಬಲ ಹೊಂದಿದೆ.