ಉತ್ಪಾದನೆಯಾದ ಆಹಾರ ಧಾನ್ಯ ಸರಿಯಾಗಿ ಬಳಕೆಯಾಗುತ್ತಿಲ್ಲ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಡಿ.16- ಭಾರತದಲ್ಲಿ ಉತ್ಪಾದನೆ, ಸಂಗ್ರಹಣೆ ಮತ್ತು ಬಳಕೆಯ ನಡುವೆ ಶೇ.40ರಷ್ಟು ಆಹಾರ ಧಾನ್ಯಗಳು ನಷ್ಟವಾಗುತ್ತಿರುವುದು ಆತಂಕಕಾರಿ, ಇದನ್ನು ತಡೆಗಟ್ಟುವ ತುರ್ತು ಅಗತ್ಯ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಎಫ್‍ಕೆಸಿಸಿಐನ ಆವರಣದಲ್ಲಿ ಮುಂದಿನ ವರ್ಷ ನಡೆಯುವ ಬೃಹತ್ ಕೃಷಿ ಮೇಳದ ಲಾಂಛನ ಬಿಡುಗಡೆ ಮಾಡಿ, ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, 2019ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ವಿಶ್ವದ 117 ದೇಶಗಳ ಪೈಕಿ 112ನೇ ಸ್ಥಾನದಲ್ಲಿದೆ. ಒಂದೆಡೆ ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಮತ್ತೊಂದು ಕಡೆ ಉತ್ಪಾದನೆಯಾದ ಆಹಾರ ಧಾನ್ಯವೂ ಸರಿಯಾಗಿ ಬಳಕೆಯಾಗುತ್ತಿಲ್ಲ. 21ದಶಲಕ್ಷ ಟನ್ ಗೋಧಿ ಪ್ರತಿ ವರ್ಷ ಬಳಕೆಯಾಗದೆ ನಷ್ಟಹೊಂದುತ್ತಿದೆ. ಈ ರೀತಿ ಅಪವ್ಯಯಗೊಳ್ಳುವ ಆಹಾರ ಧಾನ್ಯದ ಒಟ್ಟು ಮೌಲ್ಯ ಸುಮಾರು 50ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
2022ರ ವೇಳೆಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಂದಿದ್ದಾರೆ. ಭೌಗೋಳಿಕವಾಗಿ ಶೇ.65ರಷ್ಟು ಪ್ರದೇಶದಲ್ಲಿ ಕೃಷಿ ನಡೆಯುತ್ತಿದೆ. ಬಹುಪಾಲು ಜನ ಕೃಷಿಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಕೃಷಿ ಮರೆತರೆ ದುರ್ಬಿಕ್ಷ್ಯ ಎದುರಾಗಲಿದೆ ಎಂಬ ನಾಣ್ನುಡಿ ಇದೆ. ವಕ್ಕಲಿಗ ವಕ್ಕದೇ ಇದ್ದರೆ ಬಿಕ್ಕುವುದು ಜಗವೆಲ್ಲಾ ಎಂಬುದು ಕೂಡ ನಮಗೆ ಅರಿವಿರಬೇಕು ಎಂದು ಹೇಳಿದರು.

ಕೃಷಿ ಸಂಸ್ಕರಣೆಯಲ್ಲಿ ಸಕಾರಾತ್ಮಕ ಬದಲಾವಣೆಯಾಗಬೇಕು. ವ್ಯವಸಾಯ ಅನ್ನದಾತನ ಆದಾಯದ ಮೂಲವಾಗಬೇಕು. ಈ ನಿಟ್ಟಿನಲ್ಲಿ ಕೃಷಿಯಲ್ಲಿ ಶೇ.100ಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಸುಮಾರು 8.7ಬಿಲಿಯನ್ ವಿದೇಶಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ ಎಂದರು.

ನಮ್ಮ ರೈತರು ಕೃಷಿಯ ಜತೆಗೆ ಉಪ ಕಸುಬುಗಳನ್ನು ರೂಢಿಸಿಕೊಳ್ಳಬೇಕು. ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಉತ್ಪಾದನೆಯನ್ನು ಸಂರಕ್ಷಿಸಲು ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದರು.

ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ 2012ರಲ್ಲಿ 26 ಸಾವಿರ ಎಕರೆಗೆ ಹನಿ ನೀರಾವರಿಯನ್ನು ಅಳವಡಿಸಿದ್ದನ್ನು ಸ್ಮರಿಸಿದ ಸಿಎಂ, ನಮ್ಮದು ರೈತ ಪರ ಸರ್ಕಾರ. ರೈತರ ಹಿತಕ್ಕಾಗಿ ಸದಾ ಚಿಂತನೆ ನಡೆಸುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಈ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರೈತರಿಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಶಿವಮೊಗ್ಗದಲ್ಲಿ ಸಾವಯವ ಕೃಷಿಕರ ಸಮ್ಮೇಳನ ನಡೆಸಲಾಗುವುದು ಎಂದು ತಿಳಿಸಿದರು.

ಎಫ್‍ಕೆಸಿಸಿಐ ಕೃಷಿ -ಕೈಗಾರಿಕೆ ವಿಷಯದಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತಂದರೆ ಮುಂದಿನ ದಿನಗಳಲ್ಲಿ ಅದನ್ನು ಬಜೆಟ್‍ನಲ್ಲಿ ಅಳವಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಎಫ್‍ಕೆಸಿಸಿಐನ ಅಧ್ಯಕ್ಷ ಸಿ.ಆರ್.ಜನಾರ್ಧನ್ ಮಾತನಾಡಿ, 2020ರ ಏಪ್ರಿಲ್ 22ರಿಂದ 26ರವರೆಗೂ ಕೃಷಿ ಮೇಳ ಆಯೋಜನೆ ಮಾಡಲಾಗಿದೆ. ಇದರಲ್ಲಿ ಸುಮಾರು 20ಸಾವಿರ ಉದ್ಯಮಿಗಳು ಭಾಗವಹಿಸಲಿದ್ದಾರೆ. 450 ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಒಂದು ಲಕ್ಷ ಮಂದಿ ಮಳಿಗೆಗೆ ಭೇಟಿ ನೀಡುವ ನಿರೀಕ್ಷೆ ಇದೆ. ಈಗಾಗಲೇ ಇಸ್ರೇಲ್, ಆಸ್ಟ್ರೇಲಿಯಾ, ಜೇಕ್ ಸೇರಿದಂತೆ ನಾಲ್ಕು ವಿದೇಶಗಳ ಕೃಷಿ ಉದ್ಯಮಿಗಳು ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಒಂದು ಸಾವಿರ ಕೃಷಿ ಉದ್ಯಮಗಳನ್ನು ಸೃಷ್ಟಿಸುವ ಗುರಿ ಇದೆ ಎಂದು ಹೇಳಿದರು.

ಸಮ್ಮೇಳನಕ್ಕಾಗಿ ರಾಜ್ಯ ಸರ್ಕಾರ ಮೂರು ಕೋಟಿ ಬಿಡುಗಡೆ ಮಾಡಿದೆ. ಸಮ್ಮೇಳನದ ಹೊತ್ತಿಗೆ ನೂತನ ಕೈಗಾರಿಕೆ ಮತ್ತು ಕೃಷಿ ಕೈಗಾರಿಕಾ ನೀತಿಗಳನ್ನು ಪ್ರಕಟಿಸಿದರೆ ಬಂಡವಾಳ ಹೂಡಿಕೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಫ್‍ಕೆಸಿಸಿಐನ ಫೆರಿಕಲ್ ಸುಂದರ್, ಐ.ಎಸ್.ಪ್ರಸಾದ್, ಸುಧಾಕರ್ ಶೆಟ್ಟಿ, ತಲ್ಲಮ್ ವೆಂಕಟೇಶ್, ಉದ್ಯಮಿ ಸದಾನಂದ ಮಯ್ಯಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ 15ರಲ್ಲಿ 12 ಸ್ಥಾನ ಗೆದ್ದಿದ್ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ