ಬೆಂಗಳೂರು: ಉಪಚುನಾವಣೆ ಫಲಿತಾಂಶ ಬಂದ ಕೂಡಲೇ ಬಿಎಸ್ವೈ ಸಂಪುಟ ವಿಸ್ತರಣೆಯಾಗಿ ತಾವೆಲ್ಲರೂ ಮಂತ್ರಿಗಳಾಗುತ್ತೇವೆಂದು ಎಣಿಸಿದ್ದ ಶಾಸಕರು ಇನ್ನೂ ಒಂದು ವಾರ ಕಾಯಬೇಕಾದ ಸ್ಥಿತಿ ಇದೆ. ಅಮಿತ್ ಶಾ ಅವರು ಈ ವಾರ ವಿವಿಧ ಕಾರ್ಯಗಳಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಅವರ ಭೇಟಿಗೆ ಸದ್ಯಕ್ಕೆ ಅವಕಾಶ ಇಲ್ಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ವಿಚಾರವನ್ನು ನೂತನ ಶಾಸಕರಿಗೆ ತಿಳಿಸಿದ್ಧಾರೆ. ಮುಂದಿನ ವಾರ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.
ಇನ್ನೂ ನಾಲ್ಕೈದು ದಿನ ನಾನು ದೆಹಲಿಗೆ ಹೋಗುವುದಿಲ್ಲ. ಅಮಿತ್ ಶಾ ಅವರು ಪ್ರಚಾರದಲ್ಲಿದ್ದಾರೆ. ಅವರು ಪ್ರಚಾರ ಮುಗಿಸಿ ವಾಪಸ್ ಬಂದ ನಂತರ ತಾನು ದೆಹಲಿಗೆ ಹೋಗಿ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುತ್ತೇನೆ ಎಂದು ಸಚಿವಾಕಾಂಕ್ಷಿ ನೂತನ ಶಾಸಕರಿಗೆ ಬಿಎಸ್ವೈ ಮನದಟ್ಟು ಮಾಡಿದ್ದಾರೆ.
ಇದೇ ವೇಳೆ, ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಯಡಿಯೂರಪ್ಪ ಅವರು ಪಕ್ಷದ ವಲಯದಲ್ಲಿ ಮೋಸ್ಟ್ ವಾಂಟೆಡ್ ವ್ಯಕ್ತಿ ಎನಿಸಿದ್ದಾರೆ. ನೂತನ ಶಾಸಕರಂತೂ ಯಡಿಯೂರಪ್ಪ ಅವರ ಜೊತೆ ತೀರಾ ನಿಕಟವಾಗಿ ಗುರುತಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಮೂಲ ಬಿಜೆಪಿಗರಿಗಿಂತಲೂ ನೂತನ ಶಾಸಕರು ಯಡಿಯೂರಪ್ಪಗೆ ಹೆಚ್ಚು ಹತ್ತಿರವಾಗಲು ಪ್ರಯತ್ನಿಸುತ್ತಿದ್ಧಾರೆ. ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಅವರು ಸಿಎಂ ಹೋದೆಡೆಯಲ್ಲೆಲ್ಲಾ ಜೊತೆಯಲ್ಲೇ ಇದ್ದಾರೆ. ಇಂದು ನಡೆದ ಪಶುಪಾಲನಾ ಕಾರ್ಯಕ್ರಮದ ಉದ್ಘಾಟನೆಯಲ್ಲೂ ಸಿಎಂ ಜೊತೆ ಗೋಪಾಲಯ್ಯ ಇದ್ದರು. ಸಚಿವ ಸ್ಥಾನಕ್ಕಾಗಿ ಮತ್ತು ಪ್ರಬಲ ಖಾತೆಗಾಗಿ ಲಾಬಿ ಮಾಡಲು ಗೋಪಾಲಯ್ಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
ಇದೇ ವೇಳೆ ಇಂದು ಮಧ್ಯಾಹ್ನದ ನಂತರ ಬಿಜೆಪಿಯ ಕಚೇರಿಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಇಲ್ಲಿ ಮುಖ್ಯಮಂತ್ರಿಗಳು ನೂತನ ಶಾಸಕರಿಗೆ ಮಂತ್ರಿ ಸ್ಥಾನ ಹಾಗೂ ಖಾತೆ ಹಂಚಿಕೆ ಕುರಿತು ಸಂಪುಟ ಸದಸ್ಯರ ಅಭಿಪ್ರಾಯ ಸಂಗ್ರಹಣೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.