ಬೆಂಗಳೂರು: ಕಾಂಗ್ರೆಸ್ ನಲ್ಲಿ ಈಗ ಎಲ್ಲರದ್ದು ಮೀನಿನ ಹೆಜ್ಜೆ. ಸಿಎಲ್ಪಿ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ವಾರ ಆಗಿದೆ. ಇತ್ತ ದಿನೇಶ್ ಗುಂಡೂರಾವ್ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಾರ ಆಗ್ತಿದೆ. ಆದರೆ ಹೈಕಮಾಂಡ್ ನಿರ್ಧಾರ ಮಾತ್ರ ರಹಸ್ಯವಾಗಿಯೇ ಉಳಿದಿದೆ. ರಾಜ್ಯ ಕಾಂಗ್ರೆಸ್ ಘಟಾನುಟಿಗಳು ದೆಹಲಿಯಲ್ಲಿ ಲಾಬಿಗೆ ಯತ್ನ ನಡೆಸುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಜತೆ ಸಮಾಧಾನದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಆರೋಗ್ಯ ವಿಚಾರಿಸಲು ಕರೆ ಮಾಡಿದಾಗ ದೆಹಲಿಗೆ ಬರಬೇಕು ಅಂತಾ ಸಿದ್ದರಾಮಯ್ಯಗೆ ರಾಹುಲ್ ಆಹ್ವಾನ ಕೊಟ್ಟಿರೋದು ಕುತೂಹಲ ಗರಿಗೆದರಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ಸ್ಥಾನಗಳಿಗೆ ಕಾಂಗ್ರೆಸ್ ನಲ್ಲಿ ಕಾದಾಟ ಜೋರಾಗಿ ಇದೆ. ಆದರೆ ಹೈಕಮಾಂಡ್ ಸಿದ್ದರಾಮಯ್ಯ, ಗುಂಡೂರಾವ್ ಅವರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಸಿದ್ದರಾಮಯ್ಯರನ್ನ ದೆಹಲಿಗೆ ಕರೆಸಿಕೊಂಡು ಅಭಿಪ್ರಾಯದ ಸಂಗ್ರಹದ ಬಳಿಕವೇ ರಾಜೀನಾಮೆಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಕಾದಾಗಲೇ ಬಡಿದುಬಿಡಬೇಕು ಎಂಬ ಮೂಲ ಕಾಂಗ್ರೆಸ್ಸಿಗರ ಗೇಮ್ ಪ್ಲಾನ್ ಉಲ್ಟಾ ಆಗುವ ಸಾಧ್ಯತೆ ಇದೆ. ಅದಕ್ಕೆ ಕಾರಣ ರಾಹುಲ್ ಗಾಂಧಿ- ಸಿದ್ದರಾಮಯ್ಯ ನಡುವಿನ ಮಾತುಕತೆ. ಆರೋಗ್ಯ ವಿಚಾರಿಸಲು ಸಿದ್ದರಾಮಯ್ಯರಿಗೆ ಶನಿವಾರ ಫೋನಾಯಿಸಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಗ್ಯ ಸುಧಾರಿಸಿದ ಬಳಿಕ ದೆಹಲಿಗೆ ಬರುವಂತೆ ಹೇಳಿದ್ದಾರಂತೆ. ಸದ್ಯಕ್ಕೆ ವಿಶ್ರಾಂತಿ ಅಗತ್ಯವಿದ್ದು 10-15 ದಿನಗಳ ಬಳಿಕ ದೆಹಲಿಗೆ ಬರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ದೆಹಲಿಗೆ ತೆರಳಿದ ಬಳಿಕ ಸಿದ್ದರಾಮಯ್ಯ ಜೊತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಲಂಕುಷವಾಗಿ ಚರ್ಚೆ ನಡೆಸಲಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಜತೆ ಚರ್ಚೆ ಬಳಿಕವಷ್ಟೇ ವಿಪಕ್ಷ ನಾಯಕನ ಸ್ಥಾನದ ರಾಜೀನಾಮೆ ವಿಚಾರ ಬಗೆಹರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ಅಂಗೀಕಾರದ ಬಗ್ಗೆಯೂ ಕೆಲ ದಿನಗಳ ಬಳಿಕವೇ ತೀರ್ಮಾನವಂತೆ. ಇದರಿಂದಾಗಿ ಸಿದ್ದರಾಮಯ್ಯ ರಾಜೀನಾಮೆ ತಕ್ಷಣ ಬಗೆಹರಿಯುವ ಉತ್ಸಾಹದಲ್ಲಿರುವ ಮೂಲ ಕಾಂಗ್ರೆಸಿಗರ ಬಣಕ್ಕೆ ಹಿನ್ನಡೆ ಆಗುತ್ತಾ? ಉತ್ಸಾಹದಲ್ಲಿ ದೆಹಲಿಯಲ್ಲಿ ತಂತ್ರಗಾರಿಕೆ ನಡೆಸುತ್ತಿರುವ ಮೂಲ ಕಾಂಗ್ರೆಸಿಗರಿಗೆ ಹೈಕಮಾಂಡ್ ಸಿಹಿ ನೀಡುತ್ತಾ? ಕಹಿ ನೀಡುತಾ.? ಅನ್ನೋ ಲೆಕ್ಕಚಾರಗಳು ನಡೆಯುತ್ತಿರೋದಂತೂ ಸತ್ಯ.