ಶಬರಿಮಲೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರಕರಣ- ಅರ್ಜಿಗಳ ಕುರಿತು ಯಾವುದೇ ಆದೇಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ, ಡಿ.13-ಪ್ರಸಿದ್ಧ ಶಬರಿಮಲೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರ ಸುರಕ್ಷಿತ ಪ್ರವೇಶಕ್ಕೆ ಪೋಲೀಸರ ರಕ್ಷಣೆಯಲ್ಲಿ ಅವಕಾಶ ಮಾಡಿಕೊಡಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಯಾವುದೇ ಆದೇಶ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.

ಈ ವಿಷಯವು ತುಂಬಾ ಭಾವನಾತ್ಮಕ, ಸೂಕ್ಷ್ಮವಾದುದು, ಇದನ್ನು ಸ್ಫೋಟಕವನ್ನಾಗಿ ಮಾಡಲು ಬಯಸುವುದಿಲ್ಲ ಎಂದು ಸರ್ವೋನ್ನತ ನ್ಯಾಯಾಲಯ ಹೇಳಿದೆ.
ಈ ಕುರಿತು ಇಬ್ಬರು ಮಹಿಳೆಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠವು, ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ. ಈ ವಿಚಾರ ಈಗಾಗಲೇ ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲಾಗಿದೆ ಎಂದರು.

ಬೃಹತ್ ಪೀಠವು ಈ ಸಂಬಂಧ ವಿಚಾರಣೆ ನಡೆಸಿ ಆದೇಶ ಹೊರಡಿಸಲಿದೆ ಎಂದು ನ್ಯಾಯಮೂರ್ತಿಗಳ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೂ ಒಳಗೊಂಡ ಪೀಠವು ಸ್ಪಷ್ಟಪಡಿಸಿತು.

ಎಲ್ಲ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸುವುದಕ್ಕೆ ಸಂಬಂಧಪಟ್ಟಂತೆ ಸೆಪ್ಟೆಂಬರ್ 28ರಂದು ಹೊರಡಿಸಿರುವ ತನ್ನ ಆದೇಶಕ್ಕೆ ತಡೆ ಇರುವುದಿಲ್ಲ ಎಂದು ಸಹ ಪೀಠ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ