ನವದೆಹಲಿ, ಡಿ.13-ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಭಾರತದಲ್ಲಿ ರೇಪ್ ಇನ್ ಇಂಡಿಯಾ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದರೆನ್ನಲಾದ ಹೇಳಿಕೆ ಸಂಸತ್ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಗ್ವಾದ ಮತ್ತು ಮಾತಿನ ಚಕಮಕಿ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಕೆಲ ಕಾಲ ಮುಂದೂಡಿದ ಪ್ರಸಂಗವೂ ನಡೆಯಿತು.
ಜಾರ್ಖಂಡ್ನಲ್ಲಿ ನಿನ್ನೆ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಅಭಿಯಾನ ಭಾರತದಲ್ಲಿ ರೇಪ್ ಇನ್ ಇಂಡಿಯಾ ಆಗಿದೆ ಎಂದು ರಾಹುಲ್ ಲೇವಡಿ ಮಾಡಿದ್ದರೆನ್ನಲಾದ ಪ್ರಕರಣ ಇಂದು ಸಂಸತ್ನ ಉಭಯ ಸದನಗಳಲ್ಲಿ ಪ್ರಸ್ತಾಪವಾಗಿ ಭಾರೀ ಕೋಲಾಹಕ್ಕೆ ಕಾರಣವಾಯಿತು.
ಈ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಸದನದಲ್ಲಿ ಕ್ಷಮೆಯಾಚಿಸಬೇಕೆಂದು ಪ್ರತಿಪಕ್ಷಗಳು ಬಿಗಿಪಟ್ಟು ಹಿಡಿದಾಗ ವಿರೋಧ ಪಕ್ಷಗಳು ಕಾಂಗ್ರೆಸ್ ಅಸ್ಸಾಂ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದಾಗ ಭಾರೀ ವಾದ-ವಾಗ್ವಾದ ನಡೆಯಿತು.
ಕೋಲಾಹಲ ವಾತಾವರಣ ನಿಯಂತ್ರಿಸಲು ಸಭಾಧ್ಯಕ್ಷ ಓಂಬಿರ್ಲಾ ಎರಡು ಬಾರಿ ಕಲಾಪವನ್ನು ಮುಂದೂಡಿದರು.
ರಾಜ್ಯಸಭೆಯಲ್ಲೂ ಸಹ ಇದೇ ವಿಷಯ ಮಾರ್ಧನಿಸಿ ಬಿಜೆಪಿ ಸದಸ್ಯರು ರಾಹುಲ್ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದಾಗ, ಕಾಂಗ್ರೆಸ್ ಸದಸ್ಯರು ಇದಕ್ಕೆ ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಮೇಲ್ಮನೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.