ನವದೆಹಲಿ,ಡಿ.12- ಪಶುವೈದ್ಯೆ ಸಾಮೂಹಿಕ ಅತ್ಯಾಚಾರ-ಹತ್ಯೆ, ಹತ್ಯೆ ಆರೋಪಿಗಳ ಎನ್‍ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿರುವ ಸುಪ್ರೀಂಕೋರ್ಟ್, 6 ತಿಂಗಳೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚನೆ ನೀಡಿದೆ.
ಆರೋಪಿಗಳ ಎನ್‍ಕೌಂಟರ್ ಪ್ರಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಸಿರ್‍ಪುರ್‍ಕರ್ ಅಧ್ಯಕ್ಷತೆಯಲ್ಲಿ ತ್ರಿ ಸದಸ್ಯ ತನಿಖಾ ಸಮಿತಿಯನ್ನುರಚಿಸಿದೆ.
ಬಾಂಬೆ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ರೇಖಾ ಬೆಲ್ಡೋಟ ಮತ್ತು ಸಿಬಿಐ ಮಾಜಿ ನಿರ್ದೇಶಕ ಕಾರ್ತಿಕೇಯನ್ ಈ ತನಿಖಾ ಸಮಿತಿಯ ಸದಸ್ಯರಾಗಿದ್ದಾರೆ.
ತನಿಖಾ ಆಯೋಗದ ಈ ಮೂವರು ಸದಸ್ಯರಿಗೆ ಸಿಆರ್‍ಪಿಎಫ್ ಭದ್ರತೆ ನೀಡಬೇಕು, ಈ ತನಿಖೆಯ ಎಲ್ಲಾ ಖರ್ಚುವೆಚ್ಚಗಳನ್ನು ತೆಲಂಗಾಣ ರಾಜ್ಯ ಸರ್ಕಾರ ಭರಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಪೋಲೀಸ್ ಎನ್‍ಕೌಂಟರ್ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿರುವ ಸುಪ್ರೀಂಕೋರ್ಟ್ ಈ ಪ್ರಕರಣ ಸಂಬಂಧ ಹೈಕೋರ್ಟ್ ವಿಚಾರಣೆ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖೆಗೆಗಳಿಗೆ ತಡೆಯಾಜ್ಞೆ ನೀಡಿದೆ.
ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಹಾಗೂ ಆನಂತರದ ಬೆಳವಣಿಗೆಗಳ ಕುರಿತು ತನಿಖಾ ತಂಡದ(ಎಸ್‍ಐಟಿ) ವರದಿಯನ್ನು ಸುಪ್ರೀಂಕೋರ್ಟ್ ಕೇಳಿದೆ .
ತೆಲಂಗಾಣ ಸರ್ಕಾರ ಪೋಲೀಸ್ ಎನ್‍ಕೌಂಟರ್‍ನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಪೋಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿ ಕೊಲ್ಲುವುದು ಅನಿವಾರ್ಯವಾಗಿತ್ತು ಎಂದು ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಂಡಿಸಿದೆ.
ರಾಜ್ಯ ಸರ್ಕಾರದ ಪರ ಸುಪ್ರೀಂಕೋರ್ಟ್‍ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಆರೋಪಿಗಳು ಪೋಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಧಿಕಾರಿಯೊಬ್ಬರ ಪಿಸ್ತೂಲ್ ಕಸಿದು ಗುಂಡು ಹಾರಿಸಲು ಯತ್ನಿಸಿದರು. ಉಳಿದ ಆರೋಪಿಗಳು ಕಲ್ಲು ತೂರಾಟ ನಡೆಸಿ ದೊಣ್ಣೆಗಳಿಂದ ಹೊಡೆದ ಪರಿಣಾಮ ಪೋಲೀಸ್ ಸಿಬ್ಬಂದಿಗೆ ಗಾಯವಾಗಿದೆ. ತಮ್ಮ ಪ್ರಾಣ ರಕ್ಷಣೆಗಾಗಿ ಪೋಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿರುವುದು ಸಮಂಜಸ ಎಂದು ವಾದಿಸಿದ್ದಾರೆ.