ಪೌರತ್ವ ತಿದ್ದುಪಡಿ ಮಸೂದೆ-ಭಾರತದ ಭವ್ಯ ಜಾತ್ಯಾತೀತ ನಿಲುವನ್ನೇ ಅಲುಗಾಡಿಸಿಸಬಹುದು-ಬಾಂಗ್ಲಾ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್

ಢಾಕಾ, ಡಿ.12- ಭಾರತ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಆ ದೇಶದ ಜಾತ್ಯಾತೀತತೆ ದುರ್ಬಲಗೊಳ್ಳಬಹುದು ಎಂದು ಬಾಂಗ್ಲಾ ದೇಶ ಅಭಿಪ್ರಾಯಪಟ್ಟಿದೆ.

ಬಾಂಗ್ಲಾ ದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮೆನ್ ಪ್ರತಿಕ್ರಿಯಿಸಿ, ಭಾರತ ಐತಿಹಾಸಿಕ ಜಾತ್ಯಾತೀತತೆಯನ್ನು ಹೊಂದಿದೆ. ಆದರೆ ಹಾಲಿ ಮೋದಿ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ಪೌರತ್ವ ತಿದ್ದುಪಡಿ ಮಸೂದೆ ಭಾರತದ ಭವ್ಯ ಜಾತ್ಯಾತೀತ ನಿಲುವನ್ನೇ ಅಲುಗಾಡಿಸಿ ಅದನ್ನು ದುರ್ಬಲಗೊಳಿಸಬಹುದು ಎಂದು ವಿಷಾದಿಸಿದ್ದಾರೆ.

ಇದೇ ವೇಳೆ ಭಾರತ ಮತ್ತು ಬಾಂಗ್ಲಾದೇಶ ಅತ್ಯುತ್ತಮ ಸೌಹಾರ್ದ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಭಾರತೀಯ ಅಲ್ಪ ಸಂಖ್ಯಾತರು ಮಾತ್ರವಲ್ಲದೇ ಬಾಂಗ್ಲಾದೇಶದ ನಾಗರಿಕರೂ ಕೂಡ ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಆತಂಕಕ್ಕೊಳಗಾಗಿದ್ದಾರೆ ಎಂದು ಹೇಳಿದರು.

ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಭಾರತದ ಗೃಹ ಸಚಿವರ ಹೇಳಿಕೆಯನ್ನು ತಳ್ಳಿ ಹಾಕಿದ ಮೊಮೆನ್ ಅವರು, ಅಮಿತ್ ಶಾ ಅವರಿಗೆ ಯಾರು ಈ ಮಾಹಿತಿ ನೀಡಿದರೋ ತಿಳಿದಿಲ್ಲ. ಆದರೆ ಅದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.

ಅಲ್ಪ ಸಂಖ್ಯಾತರ ದಬ್ಬಾಳಿಕೆ ಹೇಳಿಕೆ ಸರಿಯಲ್ಲ. ಬಹುಶಃ ಅಮಿತ್ ಶಾ ಅವರಿಗೆ ತಪ್ಪು ಮಾಹಿತಿ ಲಭ್ಯವಾಗಿರಬಹುದು. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ. ಅಲ್ಪಸಂಖ್ಯಾತರ ಕುರಿತಂತೆ ನಮ್ಮ ದೇಶ ಸಾಕಷ್ಟು ಅತ್ಯುತ್ತಮ ನಿರ್ಣಯಗಳನ್ನು ಕೈಗೊಂಡಿದೆ. ಇಲ್ಲಿ ಎಲ್ಲ ಧರ್ಮೀಯರು ಎಲ್ಲ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಅವರ ಸರ್ವ ಸ್ವತಂತ್ರರು ಎಂದು ಮೊಮೆನ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ