ಬೆಂಗಳೂರು, ಡಿ.13-ವಾಹನ ನಿಲುಗಡೆಗೆ ಜಾಗ ಹೊಂದಿರುವ ಬಗ್ಗೆ ದೃಢೀಕರಣ ಪತ್ರ ನೀಡದ ಹೊರತು ನೋಂದಣಿಗೆ ಅವಕಾಶ ನೀಡದಿರುವ ನಿಯಮವನ್ನು ಹೊಸ ವರ್ಷದಿಂದಲೇ ಜಾರಿಗೆ ತರಲು ಪ್ರಯತ್ನಿಸುವುದಾಗಿ ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ಕಳುಹಿಸಿರುವ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಶೀಲಿಸಲಾಗಿದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಇಂತಹ ಕ್ರಮಗಳು ಅನಿವಾರ್ಯ. ನಿಲುಗಡೆ ಸ್ಥಳ ಇಲ್ಲದ ವಾಹನಗಳ ನೋಂದಣಿಗೆ ಅವಕಾಶ ನೀಡುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ದೃಢೀಕರಣ ಪತ್ರ ನೀಡಲಿದ್ದಾರೆ. ಇದು ಹೊಸ ನಿಯಮಾವಳಿಯನ್ನು ಮುಂದಿನ ವರ್ಷದಿಂದ ಜಾರಿಗೆ ತರಲಾಗುವುದು ಎಂದರು.
ಸಾರಿಗೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ಜಾರಿಗೆ ತರದಿರಲು ಸರ್ಕಾರ ನಿರ್ಧರಿಸಿದೆ ಎಂದು ಕೆಲ ವದಂತಿಗಳು ಹರಡಿದ್ದವು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಆಯುಕ್ತರು ಪ್ರಸ್ತಾವನೆಯನ್ನು ಜಾರಿಗೆ ತರಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದ್ದಾರೆ.