ಗುವಾಹಟಿ,ಡಿ.12- ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದ್ದು, ಇಂದು ಬೆಳಗ್ಗೆ ಉದ್ರಿಕ್ತರನ್ನು ಚದುರಿಸಲು ಪೋಲೀಸರು ನಡೆಸಿದ ಗೋಲಿಬಾರ್ನಲ್ಲಿ ಅನೇಕರು ಗಾಯಗೊಂಡಿದ್ದಾರೆ.
ರಾಜಧಾನಿ ಗುವಾಹಟಿಯ ಲುನನ್ಗಾಂವ್ ಬಳಿ ಇಂದು ಬೆಳಗ್ಗೆ ಕಫ್ರ್ಯೂ ಬೇಧಿಸಿ ಅನೇಕ ಪ್ರತಿಭಟನಾಕಾರರು ರಸ್ತೆಗಿಳಿದು ಹಿಂಸಾತ್ಮಕ ಹೋರಾಟ ಮುಂದುವರೆಸಿದರು.
ಭದ್ರತಾ ಪಡೆಗಳತ್ತ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿದರು. ಈ ಘಟನೆಯಲ್ಲಿ ಕೆಲವು ಪೋಲೀಸರಿಗೆ ಗಾಯಗಳಾಗಿವೆ.
ಪೋಲೀಸರ ಎಚ್ಚರಿಕೆಯ ನಡುವೆಯೂ ಉದ್ರಿಕ್ತರ ಗುಂಪು ಕಲ್ಲು ತೂರಾಟ ಮುಂದುವರೆಸಿದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆ ಗುಂಡು ಹಾರಿಸಿದ್ದು, ಗೋಲಿಬಾರ್ನಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿಲ್ಲ. ಗುವಾಹಟಿಯ ಬೀದಿಗಳು ಅಕ್ಷರಶಃ ರಣರಂಗವಾಗಿದ್ದು, ಕೆಲವೆಡೆ ಪೋಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಮುಂದುವರೆದಿದೆ.
ಪರಿಸ್ಥಿತಿಯನ್ನು ತಹಬಂದಿಗೆ ತರಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.