ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ

ಬೆಂಗಳೂರು,ಡಿ.12- ಉಪಚುನಾವಣೆಯಲ್ಲಿ ಗೆದ್ದು ಗೂಟದ ಕಾರು ಏರಲು ಸಜ್ಜಾಗಿದ್ದ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ ಉಂಟಾಗಿದೆ.

ಏಕೆಂದರೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದ್ದು, ಇನ್ನು ಕೆಲವು ದಿನಗಳವರೆಗೆ ನೂತನ ಶಾಸಕರ ಹೊಯ್ದಾಟ ಮುಂದುವರೆಯಲಿದೆ.

ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತದೆ ಎಂಬ ಬಗ್ಗೆ ಪರೋಕ್ಷ ಸುಳಿವು ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಾಲ್ಕೈದು ದಿನಗಳ ನಂತರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

ಛತ್ತೀಸ್‍ಘಡ ವಿಧಾನಸಭೆ ಚುನಾವಣೆ ಇನ್ನು 3 ಹಂತದಲ್ಲಿ ನಡೆಯುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಹೀಗಾಗಿ ಯಡಿಯೂರಪ್ಪನವರು ಸದ್ಯ ದೆಹಲಿಗೆ ತೆರಳುವ ಸಾಧ್ಯತೆಗಳು ಕ್ಷೀಣಿಸಿವೆ. ವರಿಷ್ಠರ ಬಳಿ ಚರ್ಚಿಸಿದ ಬಳಿಕವಷ್ಟೇ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ.

ಸೋಮವಾರದಿಂದ ಧನುರ್ಮಾಸ ಆರಂಭವಾಗಲಿದ್ದು, ಸಾಮಾನ್ಯವಾಗಿ ಈ ವೇಳೆ ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಹೀಗಾಗಿ ಜನವರಿ 14ರ ನಂತರ ಅಂದರೆ ಸಂಕ್ರಾಂತಿಯ ಹಬ್ಬದ ನಂತರವೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಮುಂದಿನ ವಾರ ದೆಹಲಿಗೆ ತೆರಳುವ ಬಿಎಸ್‍ವೈ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವರು. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯೋ ಎಂಬುದು ಅಲ್ಲಿಯೇ ನಿರ್ಧಾರವಾಗಲಿದೆ.

ದುಂಬಾಲು ಬಿದ್ದ ಶಾಸಕರು:
ಈ ನಡುವೆ ನೂತನವಾಗಿ ಆಯ್ಕೆಯಾಗಿರುವ ಶಾಸಕರು ಮತ್ತು ಸಚಿವಾಕಾಂಕ್ಷಿಗಳು ಆದಷ್ಟು ಶೀಘ್ರ ಸಂಪುಟ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.

ಕೇಂದ್ರ ನಾಯಕರ ಜೊತೆ ಮಾತುಕತೆ ನಡೆಸಿ ಶನಿವಾರ ಇಲ್ಲವೇ ಸೋಮವಾರ ಸಂಪುಟ ವಿಸ್ತರಣೆ ಮಾಡಬೇಕೆಂದು ನಿರಂತರವಾಗಿ ಸಿಎಂಗೆ ಮನವಿ ಮಾಡುತ್ತಲೇ ಇದ್ದಾರೆ.

ವಿಳಂಬವಾದಷ್ಟು ಬೇರೆ ಬೇರೆ ರೀತಿಯ ವಿದ್ಯಮಾನಗಳು ಜರುಗುವುದರಿಂದ ಆದಷ್ಟು ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮುಗಿಸಬೇಕೆಂಬುದು ಶಾಸಕರ ಒತ್ತಡವಾಗಿದೆ. ಆದರೆ ಪ್ರತಿಯೊಂದು ನಿರ್ಧಾರವೂ ದೆಹಲಿಯಲ್ಲೇ ಅಂತಿಮಗೊಳ್ಳುವುದರಿಂದ ಬಿಎಸ್‍ವೈ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.

ಗಜಪ್ರಸವದಂತಿರುವ ಸಂಪುಟ ವಿಸ್ತರಣೆಯನ್ನು ಆದಷ್ಟು ಶೀಘ್ರ ಮುಗಿಸಿ ತಮ್ಮ ಭಾರವನ್ನು ಇಳಿಸಿಕೊಳ್ಳಬೇಕೆಂಬುದು ಮುಖ್ಯಮಂತ್ರಿಗಳ ಆಲೋಚನೆ. ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಲೇ ಇದ್ದರೆ ಶಾಸಕರ ಅಸಮಾಧಾನವೂ ಹೆಚ್ಚಾಗುತ್ತದೆ. ಸರ್ಕಾರದಲ್ಲಿ ಭಿನ್ನಮತ ಸೃಷ್ಟಿಗೆ ಇದು ಕಾರಣವಾಗುವುದರಿಂದ ಆದಷ್ಟು ಭಾರ ಇಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಬಿಎಸ್‍ವೈ.

ಇನ್ನೊಂದು ಮೂಲಗಳ ಪ್ರಕಾರ ಯಡಿಯೂರಪ್ಪ ಶನಿವಾರ ನವದೆಹಲಿಗೆ ತೆರಳಿ ಭಾನುವಾರ ಸಂಪುಟ ವಿಸ್ತರಣೆ ಮಾಡಲು ವರಿಷ್ಠರ ಬಳಿ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ