ಬೆಂಗಳೂರು,ಡಿ,10-ಬಂಡಾಯ ಅಭ್ಯರ್ಥಿಯಾಗಿ ಬಿಜೆಪಿಯ ಎಂಟಿಬಿ ನಾಗರಾಜ್ ವಿರುದ್ಧ ಗೆಲುವು ಸಾಧಿಸಿರುವ ಶರತ್ ಬಚ್ಚೇಗೌಡರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಮಾತೇ ಇಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.
ಶರತ್ ಬಚ್ಚೇಗೌಡ ಪಕ್ಷದ ಮಾತಿಗೆ ಬೆಲೆ ಕೊಡದೇ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೀಗಾಗಿ ನಾ ಇರುವವರೆಗೂ ಅವರಿಗೆ ಬಿಜೆಪಿ ಪಕ್ಷದ ಒಳಗೆ ಮತ್ತೆ ಪ್ರವೇಶವಿಲ್ಲ. ಯಾವುದೇ ಸ್ಥಾನಮಾನ ನೀಡಲಾಗುವುದಿಲ್ಲ ಎಂದು ಎಂಟಿಬಿ ನಾಗರಾಜ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಚ್ಚೇಗೌಡ ಒಪ್ಪಿಗೆ ಸೂಚಿಸಿದ ನಂತರವೇ ಎಂಟಿಬಿ ನಾಗರಾಜ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಆದರೂ, ಹಿರಿಯ ನಾಯಕರ ಮಾತಿಗೆ ಬೆಲೆ ಕೊಡದೆ ಶರತ್ ಬಚ್ಚೇಗೌಡ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಎಂಟಿಬಿ ನಾಗರಾಜ್ ಸೋಲಿಗೆ ಕಾರಣರಾಗಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿ ಕರೆದು ಸಂಸದ ಬಚ್ಚೇಗೌಡ ಅವರ ವಿರುದ್ಧ ಕಿಡಿಕಾರಿದ್ದ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಬಾರದು ಎಂದು ಸಿಎಂ ಯಡಿಯೂರಪ್ಪ ಅವರಿಗೆ ದೀರ್ಘ ಪತ್ರ ಬರೆದು ಒತ್ತಾಯಿಸಿದ್ದರು.
ನಂತರ ಎಂಟಿಬಿ ನಾಗರಾಜ್ ಅವರನ್ನು ಭೇಟಿ ಮಾಡಿ ಭರವಸೆ ನೀಡಿರುವ ಬಿ.ಎಸ್. ಯಡಿಯೂರಪ್ಪ, “ನಾನು ಮುಖ್ಯಮಂತ್ರಿಯಾಗಲು ನೀವೆ ಕಾರಣ. ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದೆ ಇದ್ದರೆ ಇಂದು ನಾನು ಸಿಎಂ ಆಗಲು ಸಾಧ್ಯವಿರುತ್ತಿರಲಿಲ್ಲ. ಹೀಗಾಗಿ ನಿಮ್ಮನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡುವ ಮೂಲಕ ನಿಮಗೆ ಸಚಿವ ಸ್ಥಾನ ನೀಡಲಾಗುವುದು” ಎಂದು ಮಾತು ನೀಡಿದ್ದಾರೆ ಎನ್ನಲಾಗುತ್ತಿದೆ.
ಸೋಲಿನ ಕಾರಣಗಳನ್ನು ಸಿಎಂಗೆ ವಿವರಿಸಿದ ಎಂಬಿಟಿ ನಾಗರಾಜ್, ಬೇಸರ, ದು:ಖದಲ್ಲೇ ಸಿಎಂ ಜತೆ ಅಳಲು ತೋಡಿಕೊಂಡರು. ಸಂಸದ ಬಚ್ಚೇಗೌಡರ ವಿರುದ್ಧ ದೂರಿನ ಸುರಿಮಳೆಗೈದರು.