ಬೆಂಗಳೂರು,ಡಿ.10- ಕಾಂಗ್ರೆಸ್ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿಂದಿನ ಕಾರಣವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ.
ಉಪಚುನಾವಣೆಯ ಸೋಲಿನ ಬಳಿಕ ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ನನ್ನ ಹೋರಾಟ ಬಿಜೆಪಿ ಪಕ್ಷದ ವಿರುದ್ಧ ಮಾತ್ರ. ಆದರೆ, ನಮ್ಮ ಪಕ್ಷದ ಒಳಗಿನ ಹಿತಶತ್ರುಗಳ ವಿರುದ್ಧ ಹೋರಾಟ ಮಾಡಲು ಸಾಧ್ಯವೇ ಇಲ್ಲ ಹೀಗಾಗಿ ನಾನು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯನ್ನು ಹಿಂಪಡೆಯುವ ಮನಸ್ಸಿಲ್ಲ ಎಂದಿದ್ದಾರೆ.
ಉಪ ಚುನಾವಣೆಯಲ್ಲಿನ ಸೋಲಿನ ಬಳಿಕ ರಾತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ದಿನೇಶ್ ಗುಂಡೂರಾವ್ ಹಾಗೂ ಪತ್ನಿ ಟಬು, ಶಿವಾಜಿನಗರದ ನೂತನ ಶಾಸಕ ರಿಜ್ವಾನ್ ಅರ್ಷದ್ ,ಮಾಜಿ ಸಚಿವ ಕೃಷ್ಣ ಭೈರೇಗೌಡ ಸಹ ಭಾಗವಹಿಸಿದ್ದರು.
ನಾನು ಬಿಜೆಪಿ ಪಕ್ಷದ ವಿರುದ್ಧ ಹೋರಾಟ ಮಾಡುತ್ತಿದ್ದೆ. ಆದರೆ, ಪಕ್ಷದ ಒಳಗಿನ ಹಿತಶತ್ರುಗಳ ವಿರುದ್ಧ ಹೋರಾಟ ಮಾಡಲು ನನ್ನಿಂದ ಸಾಧ್ಯವೇ ಇಲ್ಲ.
ಕತ್ತಲಲ್ಲಿ ಇದ್ದುಕೊಂಡು ಬೆಳಕಲ್ಲಿ ಇರುವವರಿಗೆ ಬಾಣ ಬಿಟ್ಟರೆ ಹೇಗೆ ಗೊತ್ತಾಗುತ್ತೆ, ಇದೇ ಕಾರಣಕ್ಕೆ ನಾನು ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈ ರಾಜೀನಾಮೆಯನ್ನು ಹಿಂಪಡೆಯಲು ಮನಸ್ಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಲುಪಿಸಿದ್ದಾರೆ. ಆದರೆ, ಸಿದ್ದರಾಮಯ್ಯ ರಾಜೀನಾಮೆ ಹಿಂದೆ ಒತ್ತಡದ ತಂತ್ರ ಇದೆ ಎನ್ನಲಾಗುತ್ತಿದೆ. ಹೀಗೊಂದು ಅನುಮಾನ ಮೂಡಲು ಕಾರಣಗಳು ಕಾರಣಗಳು ಸಾಕಷ್ಟಿವೆ. ಅಲ್ಲದೆ, ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಂಗೀಕಾರ ಮಾಡುತ್ತಾ? ಎಂಬ ಪ್ರಶ್ನೆಯೂ ಇದೀಗ ರಾಜ್ಯ ರಾಜಕೀಯದಲ್ಲಿ ಕೂತಹಲದ ಕೇಂದ್ರಬಿಂದುವಾಗಿದೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಿಂದ ಉಪ ಚುನಾವಣೆವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಾಲು ಸಾಲು ಸೋಲುಗಳನ್ನು ಅನುಭವಿಸಿದೆ. ಆದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಪ್ರಾದೇಶಿಕ ಕಾಂಗ್ರೆಸ್ ನಲ್ಲಿ ವರ್ಚಸ್ವಿ ನಾಯಕ ಎಂದರೆ ತಪ್ಪಾಗಲಾರದು.
ಸಿಎಂ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನವನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ. ಅಲ್ಲದೆ, ಆಡಳಿತರೂಢ ಪಕ್ಷವನ್ನು ಕಟು ಟೀಕೆಗೆ ಗುರಿಪಡಿಸುವ ಸಾಮಥ್ರ್ಯವಿರುವ ವಿರೋಧ ಪಕ್ಷದ ಏಕೈಕ ನಾಯಕ ಸಿದ್ದರಾಮಯ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಅಲ್ಲದೆ, ಪ್ರಸ್ತುತ ಕಾಂಗ್ರೆಸ್ ಪರಿಸ್ಥಿತಿಯನ್ನು ಗಮನಿಸಿದರೆ ವಿಪಕ್ಷ ನಾಯನಂತಹ ಉನ್ನತ ಹುದ್ದೆಯನ್ನು ನಿಭಾಯಿಸಬಲ್ಲ ಮತ್ತೋರ್ವ ನಾಯಕರ್ಯಾರು ಕಾಣಿಸುತ್ತಿಲ್ಲ. ಇನ್ನೂ ಡಿ.ಕೆ. ಶಿವಕುಮಾರ್ ಅವರಿಗೆ ಆ ಸಾಮಥ್ರ್ಯ ಇದೆ. ಆದರೆ, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜೈಲು ಪಾಲಾಗಿದ್ದ ಡಿಕೆಶಿ ಅವರಿಗೆ ಇಷ್ಟು ಬೇಗ ವಿಪಕ್ಷ ನಾಯಕನ ಜವಾಬ್ದಾರಿಯನ್ನು ಕೈ ಹೈಕಮಾಂಡ್ ನೀಡಲಾರದು ಎನ್ನಲಾಗುತ್ತಿದೆ.
ಹೀಗಾಗಿ ಪಕ್ಷದೊಳಗಿನ ಸದ್ಯದ ಅಸಮಾಧಾನವನ್ನು ಶಮನಗೊಳಿಸುವುದಕ್ಕಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಕಸ್ಮಾತ್ ಕಾಂಗ್ರೆಸ್ ಹೈಕಮಾಂಡ್ ಅಂಗೀಕರಿಸಿದರೆ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಸೈಲೆಂಟ್ ಆಗ್ತಾರೆ. ಆಗ ಆಡಳಿತ ಪಕ್ಷದ ತಪ್ಪು ನಿರ್ಧಾರವನ್ನು ಟೀಕೆ ಮಾಡುವುದು ಮತ್ತು ಪಕ್ಷದ ಸಂಘಟನೆ ಕಾಂಗ್ರೆಸ್? ಪಕ್ಷಕ್ಕೆ ಕಷ್ಟವಾಗುತ್ತದೆ.
ಈ ಕುರಿತ ಅರಿವು ಕಾಂಗ್ರೆಸ್ ನಾಯಕರಿಗೂ ಇದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಮನವೊಲಿಸಿ ಹೈಕಮಾಂಡ್ ಮತ್ತೆ ವಿಪಕ್ಷ ನಾಯಕನ ಸ್ಥಾನದಲ್ಲಿ ಕೂರಿಸಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಮತ್ತೆ ಸಿದ್ದರಾಮಯ್ಯನವರನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿದರೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಎತ್ತರಕ್ಕೆ ಏರಲಿದ್ದಾರೆ. ಅಲ್ಲದೆ, “ಕಾಡಿ ಬೇಡಿ ವಿಪಕ್ಷ ನಾಯಕ ಸ್ಥಾನ ಪಡೆದ ಸಿದ್ದು” ಎಂಬ ಆಡಳಿತ ಪಕ್ಷವಾದ ಬಿಜೆಪಿ ನಾಯಕರ ಟೀಕೆಗೂ ಶಾಶ್ವತ ಬ್ರೇಕ್ ಬೀಳಲಿದೆ.