ಭಾರತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು

ಬೆಂಗಳೂರು, ಡಿ.11-ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಭಾರತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಇಂದು ಕೆಪಿಸಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹಿರಿಯ ನಾಯಕರಾದ ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಎನ್.ಎಸ್.ವಿ ಅಧ್ಯಕ್ಷ ಮಂಜುನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ ಅವರು, ಭಾರತದ ಆರ್ಥಿಕವಾಗಿ ದಿವಾಳಿಯಾಗಿದೆ. ಸಾರ್ವಜನಿಕ ಉದ್ದಿಮೆಗಳು ಮಾರಾಟಗೊಳ್ಳುತ್ತಿವೆ. ಬ್ಯಾಂಕ್‍ಗಳು ನಷ್ಟದಲ್ಲಿವೆ. ಇದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಸಂಸತ್‍ನಲ್ಲಿ ಕಾಯ್ದೆ ಮಂಡನೆ ವೇಳೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ದೇಶ ವಿಭಜನೆ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ. ಆ ಸಂದರ್ಭದಲ್ಲಿದ್ದ ಪರಿಸ್ಥಿತಿಯಿಂದಾಗಿ ದೇಶ ವಿಭಜನೆಯಾಯಿತೇ ಹೊರತು ಕಾಂಗ್ರೆಸ್ ಅದಕ್ಕೆ ಕಾರಣವಲ್ಲ. ಆಧಾರ ರಹಿತ ಸುಳ್ಳುಗಳನ್ನು ಹೇಳಿ, ಜನರಲ್ಲಿ ಕಾಂಗ್ರೆಸ್ ಬಗ್ಗೆ ದ್ವೇಷದ ಭಾವನೆ ಮೂಡಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲು ಹೊರಟಿರುವ ಪೌರತ್ವ ಕಾಯ್ದೆ ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಕಾನೂನು ರೂಪಿಸಲಾಗುತ್ತಿದೆ. ಜಾತ್ಯತೀತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ತಿದ್ದುಪಡಿಯನ್ನು ಬೆಂಬಲಿಸಬಾರದು. ಲೋಕಸಭೆಯಲ್ಲಿ ಬಹುಮತವಿರುವುದರಿಂದ ಕೇಂದ್ರ ಸರ್ಕಾರ ಅಂಗೀಕಾರ ಪಡೆದುಕೊಂಡಿದೆ. ಆದರೆ ಈ ಮಸೂದೆ ರಾಜ್ಯಸಭೆಯಲ್ಲಿ ಸೋಲಬೇಕು . ಒಂದು ವೇಳೆ ಅಂಗೀಕಾರ ಪಡೆದರೂ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತದೆ. ಬಿಜೆಪಿ ನಾಯಕರು ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿಲ್ಲ, ಮುಂದೆಯೂ ಈಡೇರಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸಂವಿಧಾನ ರಕ್ಷಣೆಗೆ ಪಣತೊಡಬೇಕು. ಪೌರತ್ವ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ಮುಂದುವರೆಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ದೇಶದ ಪೌರತ್ವ ಪಡೆಯಲು ಯಾರೆಲ್ಲ ಅರ್ಹರು ಎಂಬ ಕುರಿತು ಸಂವಿಧಾನದಲ್ಲಿ ಸ್ಪಷ್ಟತೆ ಇದೆ. ಅದಕ್ಕೆ ವಿರುದ್ಧವಾಗಿ ತಿದ್ದುಪಡಿ ಮಸೂದೆ ತರಲಾಗುತ್ತಿದೆ. ಇದರಿಂದಾಗಿ ವಿದೇಶಗಳಲ್ಲಿರುವ ಅಲ್ಪಸಂಖ್ಯಾತರ ಮೇಲೆ ಭಾರೀ ಪ್ರಭಾವ ಬೀರಲಿದೆ. ಜಾತಿ, ಧರ್ಮದ ನಡುವೆ ತಾರತಮ್ಯ ಮಾಡಿದಂತಾಗುತ್ತದೆ. ಈಶಾನ್ಯ ಭಾಗದ ಏಳು ರಾಜ್ಯಗಳು ಮಸೂದೆಯನ್ನು ವಿರೋಧಿಸಿ ಈಗಾಗಲೇ ಭಾರೀ ಪ್ರತಿಭಟನೆಗಳನ್ನು ಮಾಡಿವೆ. ಯಾವುದೇ ಕಾರಣಕ್ಕೂ ಕಾಯ್ದೆ ಜಾರಿಯಾಗಬಾರದು. ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಐದು ವರ್ಷದಿಂದ ಪೌರತ್ವದ ವಿಷಯವಾಗಿ ರಾಜಕಾರಣ ಮಾಡಿಕೊಂಡು ಬಂದ ಕೇಂದ್ರ ಸರ್ಕಾರ ಕಳೆದ ಬಾರಿಯೇ ಈ ಮಸೂದೆ ಜಾರಿಗೆ ತರಲು ಪ್ರಯತ್ನಿಸಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಈಗ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ಭಸ್ಮಾಸುರರಿದ್ದಂತೆ. ಅವರು ಕೈಯಿಟ್ಟ ಕಡೆಯಲ್ಲೆಲ್ಲ ಭಸ್ಮವಾಗುತ್ತಿದೆ, ನಾಶವಾಗುತ್ತಿದೆ. ಆರ್‍ಬಿಐಗೆ ಕೈಯಿಟ್ಟರು ದೇಶದ ಅರ್ಥವ್ಯವಸ್ಥೆಯೇ ನಾಶವಾಯಿತು. ಈಗ ಸಂವಿಧಾನಕ್ಕೆ ವಿರುದ್ಧವಾಗಿ ಪೌರತ್ವ ಮಸೂದೆ ತರಲು ಹೊರಟಿದ್ದಾರೆ. ಸಂವಿಧಾನದ ಮೇಲೂ ಕೈಯಿಡಲು ಮುಂದಾಗಿದ್ದಾರೆ. ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ಹಿಂದೆ ಕೇಂದ್ರ ಸಚಿವರಾಗಿದ್ದ ಅನಂತ್‍ಕುಮಾರ್ ಹೇಳಿದ್ದರು. ಈಗ ಕೇಂದ್ರ ಸರ್ಕಾರ ಹಂತ ಹಂತವಾಗಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾಗಿವೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ