ಜೆರ್ಸಿಸಿಟಿ, ಡಿ.11- ಅಮೆರಿಕದ ಜೆರ್ಸಿ ಸಿಟಿಯಲ್ಲಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಪೋಲೀಸ್ ಅಧಿಕಾರಿ ಸೇರಿ ಆರು ಮಂದಿ ಹತರಾಗಿದ್ದಾರೆ. ಈ ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ.
ಗುಂಡಿನ ಚಕಮಕಿಯಲ್ಲಿ ಮೂವರು ಸಾರ್ವಜನಿಕರು ಮತ್ತು ಇಬ್ಬರು ಬಂದೂಕುಧಾರಿಗಳು ಸಹ ಮೃತಪಟ್ಟಿದ್ದಾರೆ ಎಂದು ಜೆರ್ಸಿ ಸಿಟಿ ಪೋಲೀಸ್ ಮುಖ್ಯಸ್ಥ ಮೈಕಲ್ ಕೆಲ್ಲಿ ತಿಳಿಸಿದ್ದಾರೆ.
ಗನ್ ಫೈಟ್ನಲ್ಲಿ ಹುತಾತ್ಮರಾದ ಡಿಟೆಕ್ಟಿವ್ ಜೋಸೆಫ್ ಸೀಲ್ಸ್ (40) ನಗರದಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜೆರ್ಸಿ ಸಿಟಿಯ ಸ್ಮಶಾನದ ಬಳಿ ದುಷ್ಕರ್ಮಿಗಳು ಬೀದಿಗಿಳಿದು ಗುಂಡಿನ ದಾಳಿ ನಡೆಸುತ್ತಿದ್ದರು. ಜನರ ರಕ್ಷಣೆ ಧಾವಿಸಿ, ಬಂದೂಕುಧಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಜೋಸೆಪ್ ಯತ್ನಿಸುತ್ತಿದ್ದಾಗ ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಬಲಿಯಾದರು.
ಈ ದಾಳಿಯಲ್ಲಿ ಮೂವರು ಸಾರ್ವಜನಿಕರು ಸಹ ಹತರಾದರು. ನಂತರ ಪೋಲೀಸ್ ಕಾರ್ಯಾಚರಣೆಯಲ್ಲಿ ಇಬ್ಬರು ಗನ್ಮ್ಯಾನ್ಗಳನ್ನು ಹೊಡೆದುರುಳಿಸಲಾಯಿತು.