
ನವದೆಹಲಿ, ಡಿ.11- ಹಾನಿಕಾರಕ ನೊರೆ ಮತ್ತು ಬೆಂಕಿಗೆ ಕಾರಣವಾಗಿ ದೇಶಾದ್ಯಂತ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದ್ದ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ಮಾಲಿನ್ಯ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಮಾ.31ರೊಳಗೆ ಮಲಿನ ನೀರು ಸಂಸ್ಕರಣಾ ಘಟಕ (ಎಸ್ಟಿಪಿ) ಸ್ಥಾಪಿಸುವಂತೆ ಗಡುವು ನೀಡಿದೆ.
ಮಾ.31, 2020ರೊಳಗೆ ಕೆರೆಗಳಲ್ಲಿ ಎಸ್ಟಿಪಿ ಸ್ಥಾಪಿಸಬೇಕು. ಇಲ್ಲದಿದ್ದರೆ ರಾಜ್ಯಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾಯಮಂಡಳಿ ಗಂಭೀರ ಎಚ್ಚರಿಕೆ ನೀಡಿದೆ.
ಕೊಳಚೆ ನೀರನ್ನು ಕೆರೆಗಳಿಗೆ ಬಿಡುವುದು ಕ್ರಿಮಿನಲ್ ಅಪರಾಧ ಎಂದು ಎನ್ಜಿಟಿ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ರಾಜ್ಯಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಈ ಮೂರೂ ಕೆರೆಗಳ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ಕೆರೆಗಳು ಮತ್ತು ಜಲಾಶಯಗಳ ಸಂರಕ್ಷಣೆ ಸರ್ಕಾರದ ಹೊಣೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಬೆಂಗಳೂರು ದೇಶದಲ್ಲೇ ಅತ್ಯಂತ ಸುಂದರ ಕೆರೆಗಳ ನಗರವಾಗಿತ್ತು. ಆದರೆ, ಈಗ ಅದು ಮಲಿನವಾಗಿದೆ. ಇದಕ್ಕೆ ಸರ್ಕಾರವೇ ಕಾರಣ. ಇದಕ್ಕಾಗಿ ಜನರನ್ನು ನಿಂದಿಸಬೇಡಿ. ನ್ಯಾಯಾಲಯ ನಿಂದನೆಯಾಗಿದೆ ಎಂಬ ಕಾರಣಕ್ಕಾಗಿ ಜನರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆಯೇ ಎಂದು ರಾಜ್ಯಸರ್ಕಾರವನ್ನು ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ಪ್ರಶ್ನಿಸಿದರು.
ಸಾರ್ವಜನಿಕ ಉಪಯೋಗದ ಕೆರೆಗಳಿಗೆ ಕೊಳಚೆ ಮತ್ತು ತ್ಯಾಜ್ಯ ನೀರನ್ನು ಬಿಡುವುದು ಕೂಡ ಒಂದು ಕ್ರಿಮಿನಲ್ ಅಪರಾಧ. ರಾಜ್ಯಸರ್ಕಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೇ ಎಂದು ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ದೇಶದ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತ ಕೆರೆ ಸಂರಕ್ಷಣೆಯನ್ನು ನಿರ್ಲಕ್ಷಿಸಿವೆ. ಎಸ್ಟಿಪಿ ಸ್ಥಾಪಿಸಬೇಕೆಂಬ ನಿಯಮ ಈಗಾಗಲೇ ಚಾಲ್ತಿಯಲ್ಲಿದೆ. ಆದರೆ, ಇದರ ಉಸ್ತುವಾರಿ ವಹಿಸುವವರು ಯಾರು ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರವೇ ಕೆರೆಗಳ ರಕ್ಷಣೆಗೆ ಮುಂದಾಗಬೇಕು.
ಮಾ.31ರೊಳಗೆ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್ಟಿಪಿ) ಸ್ಥಾಪನೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಎನ್ಜಿಟಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎಚ್ಚರಿಕೆ ನೀಡಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದ ಸುಪ್ರೀಂಕೋರ್ಟ್ ಹಸಿರು ನ್ಯಾಯಮಂಡಳಿಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿತ್ತು. ಅಲ್ಲದೆ, ಕೆರೆಗಳ ಮಾಲಿನ್ಯದ ನಿರ್ಲಕ್ಷ್ಯಕ್ಕಾಗಿ 100 ಕೋಟಿ ರೂ. ದಂಡ ಪಾವತಿಸಬೇಕೆಂಬ ಎನ್ಜಿಟಿ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.
ಸುಪ್ರೀಂಕೋರ್ಟ್ ನಿರ್ದೇಶನದಿಂದ ಎಚ್ಚೆತ್ತ ರಾಜ್ಯಸರ್ಕಾರ ಇತ್ತೀಚೆಗೆ ಎನ್ಜಿಟಿ ಮುಂದೆ ಕ್ಷಮೆ ಕೋರಿ ನ್ಯಾಯಮಂಡಳಿ ನಿರ್ದೇಶನಗಳನ್ನು ಪಾಲಿಸುವುದಾಗಿ ಪ್ರಮಾಣಪತ್ರ ಸಲ್ಲಿಸಿತ್ತು.