ಸಚಿವ ಸ್ಥಾನಗಳಿಗೆ ಪೈಪೋಟಿ ನಡೆದಿಲ್ಲ- ಯಾವ ಸ್ಥಾನಮಾನ ಕೊಟ್ಟರೂ ನಿಭಾಯಿಸುತ್ತೇವೆ-ನೂತನ ಶಾಸಕ ಎಸ್.ಟಿ.ಸೋಮಶೇಖರ್

ಬೆಂಗಳೂರು, ಡಿ.11-ನಾವು ಯಾರೊಬ್ಬರೂ ಇಂತಹದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿಲ್ಲ. ಮುಖ್ಯಮಂತ್ರಿಗಳು ಯಾವುದೇ ಖಾತೆ ಕೊಟ್ಟರೂ ಅದನ್ನು ನಿಭಾಯಿಸುತ್ತೇವೆ ಎಂದು ನೂತನ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಡಾಲರ್ಸ್ ಕಾಲೋನಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ. ಪರಸ್ಪರ ಸಹಕಾರದಿಂದ ಇರುತ್ತೇವೆ ಎಂದು ತಿಳಿಸಿದರು.

ನಮಗೆ ಇದೇ ಖಾತೆ ಬೇಕು ಎನ್ನುವುದಾಗಲಿ, ಇಂತಹದ್ದೇ ಜಿಲ್ಲೆಯ ಉಸ್ತುವಾರಿ ನೀಡಬೇಕೆಂದು ಮುಖ್ಯಮಂತ್ರಿಯವರಿಗೆ ಒತ್ತಡ ಹಾಕಿಲ್ಲ. ನಮಗೆ ಅವರ ಬಗ್ಗೆ ನಂಬಿಕೆ ಇದೆ. ಕೊಟ್ಟ ಮಾತನ್ನು ನಡೆಸಿಕೊಡಲಿದ್ದಾರೆ. ಯಾವ ಸ್ಥಾನಮಾನ ಕೊಟ್ಟರೂ ನಿಭಾಯಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಚಿವ ಸ್ಥಾನಗಳಿಗೆ ಪೈಪೋಟಿ ನಡೆದಿಲ್ಲ. ನಾವು ಯಾರ ಜೊತೆಗೂ ಪೈಪೋಟಿಯನ್ನೇ ಮಾಡಿಲ್ಲ. ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಸ್ಥಾನಮಾನ ನೀಡುತ್ತಾರೆ. ಯಾರಿಗೆ ಯಾವ ಖಾತೆ ಕೊಡಬೇಕೆಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದರು.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ವೇಳೆ ಮಸ್ಕಿ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವಿವಾದ ಕುರಿತಂತೆ ಮಾತುಕತೆ ನಡೆಸಿದ್ದೇವೆ. ಇದನ್ನು ಇತ್ಯರ್ಥ ಪಡಿಸುವ ಭರವಸೆ ಕೊಟ್ಟಿದ್ದಾರೆ. ನಮಗೆ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇರುವುದರಿಂದ ಶೀಘ್ರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಇಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಉಪಚುನಾವಣೆಯಲ್ಲಿ ಸಹಕರಿಸಿದ ಅವರಿಗೆ ಅಭಿನಂದನೆ ಸಲ್ಲಿಸಿದ್ದೇವೆ. ಸದ್ಯದಲ್ಲೇ ದೆಹಲಿ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸುಭದ್ರವಾಗಿದ್ದು, ಮುಂದಿನ ದಿನಗಳಲ್ಲಿ ಜನತೆಗೆ ನೀಡಿದ ಆಶ್ವಾಸನೆಯಂತೆ ಆಡಳಿತ ನಡೆಸುವ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ