ನವದೆಹಲಿ, ಡಿ.11- ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಪಾವತಿಯಾಗಬೇಕಾಗಿರುವ ಜಿಎಸ್ಟಿ ಪರಿಹಾರ ವಿಳಂಬವಾಗುತ್ತಿರುವುದನ್ನು ಪ್ರತಿಭಟಿಸಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಗದ್ದಲ, ಕೋಲಾಹಲ ವಾತಾವರಣ ಸೃಷ್ಟಿಸಿದ ಕಾರಣ ಸದನವನ್ನು ಒಂದು ತಾಸು ಮುಂದೂಡಲಾಗಿತ್ತು.
ಸಂಸತ್ತಿನ ಮೇಲ್ಮನೆಯಲ್ಲಿ ಕಲಾಪ ಇಂದು ಆರಂಭವಾಗುತ್ತಿದ್ದಂತೆ ತೆಲಂಗಾಣ ರಾಷ್ಟ್ರೀಯ ಸಮಿತಿ ಸದಸ್ಯರು ಈ ವಿಷಯ ಪ್ರಸ್ತಾಪಿಸಿ ಕೇಂದ್ರದಿಂದ 9 ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಮೊತ್ತ ಬಾಕಿ ಇದೆ. ಪಾವತಿ ವಿಳಂಬದಿಂದಾಗಿ ರಾಜ್ಯಗಳ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ಟಿಆರ್ಎಸ್ ಸದಸ್ಯ ಕೇಶವರಾವ್ ಹೇಳಿದರು.
ಪ್ರಶ್ನೋತ್ತರ ಕಲಾಪ ಬದಿಗೊತ್ತಿ ಈ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂಬ ಪ್ರತಿಪಕ್ಷಗಳ ನಿಲುವಳಿ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ವೆಂಕಯ್ಯ ನಾಯ್ಡು ಈ ವಿಷಯದ ಬಗ್ಗೆ ೀಗಾಗಲೇ ಸದನದಲ್ಲಿ ಚರ್ಚೆಯಾಗಿ ಉತ್ತರ ನೀಡಲಾಗಿದೆ. ಮತ್ತೆ ಇದನ್ನು ಪ್ರಸ್ತಾಪಿಸುವ ಔಚಿತ್ಯ ಏನೆಂದು ಪ್ರಶ್ನಿಸಿದರು.
ಆದರೆ ಟಿಆರ್ಎಸ್ ಸದಸ್ಯರು ಸಭಾಪತಿ ಪೀಠದ ಮುಂದಿನ ಸ್ಥಳಕ್ಕೆ ಧಾವಿಸಿ ಘೋಷಣೆ ಪತ್ರಗಳೊಂದಿಗೆ ಧರಣಿ ನಡೆಸಲು ಮುಂದಾದರು.
ಕಾಂಗ್ರೆಸ್ , ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸಂಸದರು ಪ್ರತಿಭಟನೆಗೆ ದನಿಗೂಡಿಸಿದರು.
ಇದರಿಂದ ಬೇಸರಗೊಂಡ ಸಭಾಪತಿ ಸದನದಲ್ಲಿ ಘೋಷಣಾ ಪತ್ರಗಳನ್ನು ಪ್ರದರ್ಶಿಸಬಾರದು. ನಿಮ್ಮ ನಿಮ್ಮ ಸ್ಥಾನಗಳಿಗೆ ಹಿಂದಿರುಗಿ ಎಂದು ಮನವಿ ಮಾಡಿದರು.
ಆದರೆ ಗದ್ದಲ ಮತ್ತು ಕೋಲಾಹಲ ವಾತಾವರಣ ಸೃಷ್ಟಿಯಾದ ಕಾರಣ ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.