ಗುವಾಹಟಿ/ಅಗರ್ತಲಾ, ಡಿ.11- ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಮಸೂದೆಗೆ ಅಸ್ಸಾಂ, ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ಮುಂದುವರೆದಿದೆ.
ತ್ರಿಪುರಾದಲ್ಲಿ ಪ್ರತಿಭಟನಾಕಾರರು ಸಂಪೂರ್ಣ ಬಂದ್ಗೆ ಕರೆ ನೀಡಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ತ್ರಿಪುರಾದಲ್ಲಿ 48 ಗಂಟೆಗಳ ಬಂದ್ ಆಚರಿಸಲಾಗುತ್ತಿದ್ದು , ಮುನ್ನೆಚ್ಚರಿಕೆ ಕ್ರಮವಾಗಿ ಅಹಿತಕರ ಘಟನೆಗಳು ಭುಗಿಲೇಳುವುದನ್ನು ತಡೆಗಟ್ಟಲು ಎಸ್ಎಂಎಸ್ ಮತ್ತು ಮೊಬೈಲ್ ಸಂಪರ್ಕ ಸೇವೆಯನ್ನು ಕಡಿತಗೊಳಿಸಲಾಗಿದೆ.
ಆಲ್ ಮೊರನ್ ಸ್ಟೂಡೆಂಟ್ ಯೂನಿಯನ್ (ಎಎಂಎಸ್ಯು) ಸಹ 48 ಗಂಟೆಗಳ ಅಸ್ಸಾಂ ಬಂದ್ಗೆ ಕರೆ ಕೊಟ್ಟಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದು 6 ಸಮುದಾಯಕ್ಕೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದೆ. ಇದರಿಂದ ರಾಜ್ಯದ ಹಲವೆಡೆ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.
ನಿನ್ನೆ ನೂರಾರು ಮಹಿಳೆಯರು, ಮಕ್ಕಳು ಅಸ್ಸಾಂ ಮತ್ತು ತ್ರಿಪುರಾಗಳಲ್ಲಿ ಬೀದಿಗಳಿದು ಬೆಳಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಚದುರಿಸಲು ದಿಬ್ರುಗರ್ಡ್ ಮತ್ತು ಗುವಾಹಟಿಯಲ್ಲಿ ಪೋಲೀಸರು ಲಾಠಿ ಪ್ರಹಾರ ನಡೆಸಿದರು. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದರು. ಕಲ್ಲು ತೂರಾಟದಲ್ಲಿ ಪೋಲೀಸರಿಗೂ ಸಹ ಗಾಯಗಳಾದವು.
ಬಂದ್ನಿಂದಾಗಿ ಕಾಜಿರಂಗಾ ನ್ಯಾಷನಲ್ ಪಾರ್ಕ್ನಲ್ಲಿ ಹಲವು ವಿದೇಶಿ ಮತ್ತು ದೇಶೀಯ ಪ್ರವಾಸಿಗರು ಬಂದ್ನಿದಾಗಿ ಅತಂತ್ರಕ್ಕೆ ಸಿಲುಕಿದರು.
ಚೀನಾ, ಬಾಂಗ್ಲಾದೇಶ, ಮೈನ್ಮಾರ್ ಮತ್ತು ಭೂತಾನ್ ದೇಶಗಳ ಜತೆ ಗಡಿಯನ್ನು ಹಂಚಿಕೊಂಡಿರುವ ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳ ಜನರು ಮಸೂದೆ ಜಾರಿಗೆ ವಿರೋಧಿಸಿ ತೀವ್ರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಮಸೂದೆ ದೇಶದ ಮುಸ್ಲಿಂರ ವಿರುದ್ಧವಾಗಿ ಇಲ್ಲ, ದೇಶದೊಳಗೆ ಅಕ್ರಮವಾಗಿ ಒಳನುಸುಳುಕೋರರನ್ನು ತಡೆಯಲು ಈ ಮಸೂದೆ ಅಸ್ತ್ರವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.