
ಬೆಂಗಳೂರು: ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿ ಸದ್ಯ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸುಭದ್ರವಾಗಿದೆ. ಆದರೆ ಇದರ ಬೆನ್ನಲ್ಲೆ ಯಡಿಯೂರಪ್ಪನವರಿಗೆ ಹೊಸ ತಲೆನೋವು ಎದುರಾಗಿದ್ದು, ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.
ಪಕ್ಷ ಸೇರಿದ್ದ ಎಲ್ಲಾ ಅನರ್ಹ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದ ಬಿಜೆಪಿಗೆ ಈಗ ಅದನ್ನು ಉಳಿಸುಕೊಳ್ಳುವ ಸವಾಲಿದೆ. ಅದರಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತ. ಆದರೆ ಪರಾಜಿತರಾಗಿರುವ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಗೆ ಬಿಜೆಪಿ ಯಾವ ಸ್ಥಾನಮಾನ ನೀಡುತ್ತದೆ ಕಾದು ನೋಡಬೇಕಾಗಿದೆ.
ಸದ್ಯ ಸಿಎಂ ಯಡಿಯೂರಪ್ಪ ನಿವಾಸಕ್ಕೆ ನೂತನ ಶಾಸಕರು ಮತ್ತು ಹಲವು ಇತರ ಶಾಸಕರು ಭೇಟಿ ನೀಡಿದ್ದಾರೆ. ರಮೇಶ್ ಜಾರಕಿಹೊಳಿ, ಡಾ. ಸುಧಾಕರ್, ಎಸ್ ಟಿ ಸೋಮಶೇಖರ್ ಮುಂತಾದವರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇವರೊಂದಿಗೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಕರುಣಾಕರ್ ರೆಡ್ಡಿ, ಸಿ.ಪಿ ಯೋಗೀಶ್ವರ್, ಸುಭಾಷ್ ಗುತ್ತೇದಾರ್, ದತ್ತಾತ್ರೇಯ ಪಾಟೀಲ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.
ಇದರೊಂದಿಗೆ ನೂತನ ಸಚಿವರು ಬೆಂಗಳೂರಿನ ಖಾಸಗಿ ಹೋಟೇಲಿನಲ್ಲಿ ಸಭೆ ನಡೆಸಿದ್ದು, ಅನರ್ಹತೆಯಿಂದ ಅರ್ಹರಾದ ಬಳಿಕವೂ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ಧಾರೆ.