ತುಮಕೂರು: ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರು ಪಾದಯಾತ್ರೆಗೆ ಹೋಗದಿರಲು ನಿರ್ಧರಿಸಿದ್ದಾರೆ. ತುಮಕೂರಿನ ಗಾಜಿನ ಮನೆಯಲ್ಲೇ ಇದ್ದುಕೊಂಡು ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.
ಎಲ್ಕೆಜಿ, ಯುಕೆಜಿ ತರಗತಿಗಳನ್ನ ಅಂಗನವಾಡಿ ಕೇಂದ್ರದಲ್ಲಿ ಮಾತ್ರ ನಡೆಸಲು ಸರ್ಕಾರ ಆದೇಶ ಹೊರಡಿಸಬೇಕು ಎಂಬ ಪ್ರಮುಖ ಬೇಡಿಕೆ ಇಟ್ಟುಕೊಂಡು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲು ಸಜ್ಜಾಗಿದ್ದರು. ಆದರೆ ಪೊಲೀಸರು ಕಾರ್ಯಕರ್ತೆಯರನ್ನ ತಡೆದಿದ್ದರಿಂದ ತುಮಕೂರಿನಲ್ಲೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸ್ಥಳಕ್ಕೆ ಬಂದು ತಮ್ಮ ಅಹವಾಲು ಸ್ವೀಕರಿಸಿ, ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮಂಗಳವಾರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕಾರ್ಯಕರ್ತೆಯರು ತುಮಕೂರಿನ ಗಾಜಿನ ಮನೆಯಲ್ಲಿ ಸೇರಿದ್ದರು. ಅಲ್ಲಿಂದಲೇ ಪಾದಯಾತ್ರೆ ಹೋಗಲು ಸಿದ್ದರಾಗಿದ್ದರು. ಪಾದಯಾತ್ರೆ ಕೈ ಬಿಟ್ಟು ಸಿಎಂ ಜೊತೆ ಮಾತುಕತೆ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ತಾತ್ಕಾಲಿಕವಾಗಿ ತಡೆಕೊಟ್ಟಿದ್ದಾರೆ. ಆದರೆ ಸಿಎಂ ಜೊತೆಗಿನ ಮಾತುಕತೆ ತೃಪ್ತಿ ತಂದಿಲ್ಲವಾದರಿಂದ ಗಾಜಿನ ಮನೆಯಲ್ಲೇ ಧರಣಿಗೆ ಮುಂದಾಗಿದ್ದಾರೆ.