ಬಿಜೆಪಿಯಲ್ಲಿ ಯಾವುದೇ ಕ್ಷಣದಲ್ಲಾದರೂ ಸ್ಫೋಟಗೊಳ್ಳುವ ಭಿನ್ನಮತ

ಬೆಂಗಳೂರು, ಡಿ.11-ಸ್ಥಾನಮಾನದ ನಿರೀಕ್ಷೆಯಿಟ್ಟುಕೊಂಡು ಪಕ್ಷಕ್ಕೆ ಬಂದವರಿಗೆ ಮಣೆ ಹಾಕುತ್ತಿರುವುದರಿಂದ ಮೂಲ ಬಿಜೆಪಿಗರು ಕುದಿಯುತ್ತಿದ್ದು, ಯಾವುದೇ ಸಂದರ್ಭದಲ್ಲೂ ತಿರುಗಿ ಬೀಳುವ ಸಾಧ್ಯತೆಗಳು ಕಂಡುಬರುತ್ತಿವೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಹೊರಬಂದು ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರಿಗೆ ಮಣೆ ಹಾಕುತ್ತಿರುವುದು ಮೂಲ ಶಾಸಕರ ಕಣ್ಣು ಕೆಂಪಾಗುವಂತೆ ಮಾಡಿದೆ.

ಒಂದೆರಡು ದಿನಗಳಲ್ಲಿ ಸಭೆ ಸೇರಲು ತೀರ್ಮಾನಿಸಿರುವ ಶಾಸಕರು ತಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಈಗಾಗಲೇ ಒತ್ತಡ ಹಾಕಿದ್ದಾರೆ.

ಪ್ರಮುಖರಾದ ಮಾಜಿ ಸಚಿವ ಉಮೇಶ್‍ಕತ್ತಿ, ಎಸ್.ಅಂಗಾರ, ಹಾಲಾಡಿ ಶ್ರೀನಿವಾಸಶೆಟ್ಟಿ, ವಿ.ಸುನೀಲ್‍ಕುಮಾರ್, ಎಂ.ಪಿ.ಕುಮಾರಸ್ವಾಮಿ, ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ದತ್ತಾತ್ರೇಯ ಪಾಟೀಲ್ ರೇವೂರ, ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಹಾಲಪ್ಪ ಆಚಾರ್, ಎಸ್.ವಿ.ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಈ ಹಿಂದೆಯೇ ಇವರೆಲ್ಲರೂ ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕೆಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದ್ದರು. ಇದೀಗ ಸೋಮವಾರ ಸಂಪುಟ ವಿಸ್ತರಣೆಯಾಗುವ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ.

ಆದರೆ ಮುಖ್ಯಮಂತ್ರಿಗಳಿಂದ ಈ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಶಾಸಕರಿಗೆ ಸ್ಥಾನಮಾನ ಕಲ್ಪಿಸಬೇಕಾಗಿರುವುದರಿಂದ ನೀವು ಅಧಿಕಾರ ತ್ಯಾಗ ಮಾಡಬೇಕೆಂದು ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ. ಇದರಿಂದ ಕೆರಳಿ ಕೆಂಡವಾಗಿರುವ ಅತೃಪ್ತರು ಸಭೆ ನಡೆಸಲು ಮುಂದಾಗಿದ್ದಾರೆ.

ಈವರೆಗೂ ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾಗಿಲ್ಲವಾದರೂ ಸೋಮವಾರ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟರೊಳಗೆ ಮುಖ್ಯಮಂತ್ರಿಯಿಂದ ಆಶ್ವಾಸನೆ ಸಿಗಬಹುದೆಂಬ ನಿರೀಕ್ಷೆ ಮೂಲ ಬಿಜೆಪಿಗರದ್ದು.

ಸಭೆ ನಡೆಸಲು ತೀರ್ಮಾನಿಸಿರುವ ಬಹುತೇಕರು ಯಡಿಯೂರಪ್ಪನವರ ಬೆಂಬಲಿಗರಾಗಿದ್ದು, ಇತ್ತ ಪಕ್ಷದಲ್ಲೂ ಇವರಿಗೆ ಸೂಕ್ತವಾದ ಸ್ಪಂದನೆ ಸಿಗುತ್ತಿಲ್ಲ.

ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ , ಪಕ್ಷದ ರಾಷ್ಟ್ರೀಯ ಸಂಘಟನಾಕಾರ್ಯದರ್ಶಿ ಸಂತೋಷ್ ಸೇರಿದಂತೆ ಮತ್ತಿತರರಿಂದಲೂ ಯಾವುದೇ ಭರವಸೆ ಈವರೆಗೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಅಲ್ಲದೆ ಉಪಚುನಾವಣೆಯಲ್ಲಿ ಯಡಿಯೂರಪ್ಪ ನಾಯಕತ್ವಕ್ಕೆ ಮತದಾರರಿಂದ ಮನ್ನಣೆ ಸಿಕ್ಕಿರುವುದರಿಂದ ಮುಂದೇನು ಮಾಡಬೇಕೆಂಬ ಅಡಕತ್ತರಿಗೆ ಸಿಲುಕಿದ್ದಾರೆ.

ಹೇಗಾದರೂ ಮಾಡಿ ಸಂಪುಟಕ್ಕೆ ಸೇರ್ಪಡೆಯಾಗಲು ತೆರೆಮರೆಯಲ್ಲಿ ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಆದರೆ ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾದರೆ ರಾಜಕೀಯ ಭವಿಷ್ಯ ಕಷ್ಟವಾದೀತು ಎಂಬ ಭಯವೂ ಅವರಲ್ಲಿ ಆವರಿಸಿದೆ.

ಸಂಪುಟದಲ್ಲಿ ಸ್ಥಾನ ಸಿಗದಿದ್ದರೂ ಕಡೇ ಪಕ್ಷ ನಿಗಮ ಮಂಡಳಿಯಲ್ಲಾದರೂ ಸ್ಥಾನ ಸಿಗಲಿ ಎಂಬ ಕಾರಣಕ್ಕಾಗಿ ಕೆಲವರು ಕಸರತ್ತು ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ