ನವದೆಹಲಿ,ಡಿ.9- ನಾವು ಯಾವುದೇ ಪಕ್ಷದ ಶಾಸಕರನ್ನು ಸೆಳೆಯಲು ಆಪರೇಷನ್ ಕಮಲ ನಡೆಸುವುದಿಲ್ಲ. ಒಂದು ವೇಳೆ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಸಾಮಾನ್ಯ ಕಾರ್ಯಕರ್ತರು ಬಂದರೂ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಆಪರೇಷನ್ ಕಮಲ ನಡೆಯಬಹುದೆಂಬ ಮುನ್ಸೂಚನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ನೀಡಿದ್ದಾರೆ.
ಫಲಿತಾಂಶ ಬಂದ ನಂತರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ರಾಜ್ಯದ ಜನತೆ ಸ್ಪಷ್ಟವಾದ ಜನಾದೇಶ ನೀಡಿದ್ದಾರೆ. ನಾವು ಬೇರೆ ಪಕ್ಷದವರನ್ನು ಸೆಳೆಯಬೇಕಾದ ಅಗತ್ಯವಿಲ್ಲ. ಅನ್ಯ ಪಕ್ಷದವರು ಬೇಡ ಎನ್ನಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಮೂರುವರೆ ವರ್ಷಗಳ ಅವಧಿಗೆ ಜನತೆ ಸ್ಥಿರ ಆಡಳಿತ ನೀಡಲು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಆಡಳಿತ ಕೊಡುವುದು ನಮ್ಮ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟದ ಸಹೋದ್ಯೋಗಿಗಳು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ ಎಂದರು.
ಸರ್ಕಾರವನ್ನು ಅಸ್ಥಿರಗೊಳಿಸುತ್ತೇವೆ ಎಂದು ಬೀಗುತ್ತಿದ್ದ ಜೆಡಿಎಸ್ನವರು ಇಂದು ತಾವೇ ಹಳ್ಳಕ್ಕೆ ಬಿದ್ದಿದ್ದಾರೆ. ಜೆಡಿಎಸ್ಗೆ ಮುಂದೆ ಇನ್ನು ಕಠಿಣ ಸಂದರ್ಭಗಳು ಎದುರಾಗಲಿವೆ ಎಂದು ಎಚ್ಚರಿಸಿದರು.
ಪ್ರಚಾರ ಸಂದರ್ಭದಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದವರನ್ನು ಅನರ್ಹರು ಎಂದು ಟೀಕೆ ಮಾಡುತ್ತಿದ್ದರು. ಉಪಚುನಾವಣೆಯ ಫಲಿತಾಂಶ ಅವರು ಅರ್ಹರು ಎಂಬುದನ್ನು ಜನಾದೇಶ ಸ್ಪಷ್ಟವಾಗಿ ತಿಳಿಸಿದೆ ಎಂದರು.