ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಗಗನಕ್ಕೆ ಏರಿದ್ದ ಈರುಳ್ಳಿ ಬೆಲೆ ಇದೀಗ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ. ಒಂದು ಕೆ.ಜಿ.ಗೆ 200 ರೂ. ಗಡಿ ತಲುಪಿದ್ದ ಈರುಳ್ಳಿಗೆ ಒಳ್ಳೆಯ ಬೆಲೆಯಿದೆ ಎಂದು ಬೆಂಗಳೂರಿನ ಎಪಿಎಂಸಿಗೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ ತರಲಾಗಿತ್ತು. ಆದರೆ, ಇದೀಗ ಈರುಳ್ಳಿ ಬೆಲೆ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಒಂದು ಕೆ.ಜಿ.ಗೆ 200 ರೂ. ಗಡಿ ತಲುಪಿದ್ದ ಈರುಳ್ಳಿ ಬೆಲೆ ಇದೀಗ ಗಣನೀಯವಾಗಿ ಇಳಿಕೆಯಾಗಿದೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿತ್ತು. ಒಂದು ಪ್ಯಾಕೆಟ್ ಉತ್ತಮ ಈರುಳ್ಳಿಗೆ 5 ಸಾವಿರ ರೂ. ನೀಡಿ ಈರುಳ್ಳಿ ಖರೀದಿಸಿ ತಂದಿದ್ದರು. ಎಪಿಎಂಸಿಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಹೊಸ ಈರುಳ್ಳಿ 1 ಕೆ.ಜಿಗೆ 80ರಿಂದ 100 ರೂ. ಆಗಿದೆ. ನಾಲ್ಕೈದು ದಿನಗಳ ಹಿಂದಿದ್ದ ಬೆಲೆಗಿಂತ ಅರ್ಧಕ್ಕರ್ಧ ಬೆಲೆ ಕಡಿಮೆಯಾಗಿದೆ.
ಈರುಳ್ಳಿಗೆ ಉತ್ತಮ ಬೆಲೆ ಮತ್ತು ಬೇಡಿಕೆಯಿದೆ ಎಂದು ಈಜಿಪ್ಟ್, ಟರ್ಕಿಯಿಂದ ತಂದ ಈರುಳ್ಳಿಯನ್ನು ಕೇಳುವವರೇ ಇಲ್ಲವಾಗಿದೆ. ಏಕಾಏಕಿ ಎಪಿಎಂಸಿಯಲ್ಲಿ ಈರುಳ್ಳಿ ಪೂರೈಕೆ ಅಧಿಕವಾಗಿದ್ದರಿಂದ ಬೇಡಿಕೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಈರುಳ್ಳಿಗೆ ಬೆಲೆ ಚೆನ್ನಾಗಿದೆ ಎಂದು ಸಾವಿರಾರುಗಟ್ಟಲೆ ಹಣ ಕೊಟ್ಟು ಖರೀದಿಸಿ ತಂದ ರೈತರ ಕಣ್ಣಲ್ಲಿ ನೀರು ಸುರಿಯುತ್ತಿದೆ. ಲಾಭ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಖರೀದಿಸಿ ಮಾರಾಟ ಮಾಡಲು ತಂದ ಈರುಳ್ಳಿಯಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.