ಹೊಸದಿಲ್ಲಿ: ಅನರ್ಹ ಶಾಸಕರಿಂದ ತೆರವಾಗಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 05 ರಂದು ನಡೆದಿದ್ದ ಉಪ ಚುನಾವಣಾ ಮತ ಎಣಿಗೆ ಆರಂಭವಾಗಿದ್ದು, ಮೊದಲ ಸುತ್ತಿನ ಅಂಚೆ ಮತ ಎಣಿಕೆಯಲ್ಲಿ 15 ಕ್ಷೇತ್ರಗಳ ಪೈಕಿ ಬಿಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಗೋಕಾಕ, ಅಥಣಿ, ರಾಣಿಬೆನ್ನೂರು, ಕಾಗವಾಡ, ಹಿರೇಕೆರೂರು, ಕೆ.ಆರ್. ಪುರ, ವಿಜಯನಗರ ಸೇರಿದಂತೆ 10 ಕ್ಷೇತ್ರಗಳಲ್ಲಿ ಆಡಳಿತರೂಢ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಜಿದ್ದಾಜಿದ್ದಿ ಕಣವಾದ ಹುಣಸೂರು ಮತ್ತು ಶಿವಾಜಿನಗರದಲ್ಲಿ ಮುನ್ನಡೆ ಸಾಧಿಸುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ರಾಜ್ಯದಲ್ಲಿ ಕಠಿಣ ತ್ರಿಕೋನ ಸ್ಪರ್ಧೆ ಇರುವು ಕೆಲವೇ ಕೆಲವು ಕ್ಷೇತ್ರಗಳ ಪೈಕಿ ಹುಣಸೂರು ಸಹ ಒಂದು.
ಇನ್ನೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಪಾಲಿಗೆ ರಣಾಂಗಣವಾಗಿದ್ದ ಕೆ.ಆರ್.ಪೇಟೆ ಹಾಗೂ ಯಶವಂತಪುರದಲ್ಲಿ ಮುನ್ನಡೆ ಸಾಧಿಸುವಲ್ಲಿ ಜೆಡಿಎಸ್ ಸಫಲವಾಗಿದೆ. ಮಾಜಿ ಸಚಿವ ಎಂಟಿಬಿ ನಾಗರಾಜ್ ಪಾಲಿಗೆ ಗೆಲ್ಲಲೇಬೇಕಿರುವ ಹೊಸಕೋಟೆ ಕ್ಷೇತ್ರದಲ್ಲಿ ಆರಂಭಿಕವಾಗಿ 1,700 ಮತಗಳ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಶಾಕ್ ನೀಡುವ ಎಲ್ಲಾ ಸೂಚನೆಗಳನ್ನೂ ನೀಡಿದ್ದಾರೆ.
ಒಟ್ಟಾರೆ ಭವಿಷ್ಯದಲ್ಲಿ ಬಿಜೆಪಿ ಸ್ಥಿರ ಸರ್ಕಾರ ರೂಪಿಸಲು 15 ಕ್ಷೇತ್ರಗಳ ಪೈಕಿ ಕನಿಷ್ಟ 9 ರಿಂದ 10 ಸ್ಥಾನಗಳನ್ನು ಗೆಲ್ಲಲೇಬೇಕಿದೆ. ಇಂತಹ ಸಂದಿಗ್ಧತೆಯಲ್ಲಿರುವ ಬಿಜೆಪಿ ಪಾಲಿಗೆ ಈ ಆರಂಭಿಕ ಮುನ್ನಡೆ ವಿಶ್ವಾಸ ಮೂಡಿಸಿರುವುದು ಸುಳ್ಳಲ್ಲ. ಆದರೆ, ಇದು ಕೊನೆಯ ಹಂತದ ಮತದಾನದ ವರೆಗೆ ಹೀಗೆ ಮುಂದುವರೆಯುತ್ತಾ? ಅಥವಾ ಬಿಜೆಪಿ ಅಭ್ಯರ್ಥಿಗಳಿಗೆ ಸೋಲುಣಿಸುವಲ್ಲಿ ಕಾಂಗ್ರೆಸ್-ಜೆಡಿಎಸ್ ಸಫಲವಾಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ.