ಯಡಿಯೂರಪ್ಪ ಸರ್ಕಾರಕ್ಕೆ ಸ್ಪಷ್ಟ ಬಹುಮತ; ಕಾಂಗ್ರೆಸ್​, ಜೆಡಿಎಸ್​ಗೆ ಹೀನಾಯ ಸೋಲು

ಬೆಂಗಳೂರು: ಬಿಜೆಪಿ ರಾಜ್ಯದಲ್ಲಿ ಮುಂದಿನ 3 ವರ್ಷ ಸ್ಥಿರ ಸರ್ಕಾರ ನಡೆಸಬೇಕು ಎಂದರೆ ಕನಿಷ್ಟ 9 ಸ್ಥಾನಗಳನ್ನಾದರೂ ಗೆಲ್ಲಲೇಬೇಕಿದ್ದ ನಿರ್ಣಾಯಕ ಉಪ ಚುನಾವಣೆಯಲ್ಲಿ ಕೊನೆಗೂ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಮಲ ಪಾಳಯ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಬಿ.ಎಸ್. ಯಡಿಯೂರಪ್ಪ ಈಗಲೂ ಅತ್ಯಂತ ಪ್ರಭಾವಿ ನಾಯಕ ಎಂಬುದನ್ನು ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ. ಅಲ್ಲಿಗೆ ಮುಂದಿನ ಮೂರು ವರ್ಷವೂ ಬಿಎಸ್ವೈ ನಿರಾತಂಕವಾಗಿ ಅಧಿಕಾರ ಚಲಾಯಿಸುವುದು ಪಕ್ಕಾ ಆದಂತಾಗಿದೆ.

ಅನರ್ಹರಿಂದ ತೆರವಾಗಿದ್ದ 15 ಕ್ಷೇತ್ರಗಳಿಗೆ ಕಳೆದ ಡಿಸೆಂಬರ್ 05 ರಂದು ಉಪ ಚುನಾವಣೆ ನಡೆದಿತ್ತು. ಅನರ್ಹರು ಹಣ ಮತ್ತು ಅಧಿಕಾರಕ್ಕಾಗಿ ಮಾತೃ ಪಕ್ಷಕ್ಕೆ ದ್ರೋಹವೆಸಗಿ ಪಕ್ಷಾಂತರ ಮಾಡಿದ್ದಾರೆ. ಹೀಗಾಗಿ ಜನ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ವಿರೋಧ ಪಕ್ಷಗಳು ರಾಜ್ಯದಾದ್ಯಂತ ದೊಡ್ಡ ಮಟ್ಟದ ಪ್ರಚಾರ ನಡೆಸಿದ್ದವು.

ವಿರೋಧ ಪಕ್ಷಗಳ ಪ್ರಚಾರಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಅನರ್ಹರ ವಿರುದ್ಧ ಜನಾಕ್ರೋಶ ದಾಖಲಾಗಿತ್ತು. ಆದರೆ, ಈ ಎಲ್ಲಾ ಜನಾಕ್ರೋಶವನ್ನು ಚುನಾವಣೆಯಲ್ಲಿ ಧೂಳೀಪಟ ಮಾಡುವಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಕೊನೆಗೂ ಸಫಲವಾದಂತಾಗಿದೆ. ಅಲ್ಲಿಗೆ ಮುಂದಿನ ಮೂರು ವರ್ಷ ಬಿ.ಎಸ್.​ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ನಿರಾಂತಕವಾಗಿ ಮುಂದುವರೆಯುವುದು ಖಚಿತವಾದಂತಾಗಿದೆ.

15 ಕ್ಷೇತ್ರಗಳ ಪೈಕಿ ಬೆಳಗಾವಿಯ ಗೋಕಾಕದಲ್ಲಿ ರಮೇಶ್ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಹಿರೇಕೆರೂರಿನಲ್ಲಿ ಬಿ.ಸಿ. ಪಾಟೀಲ್, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್, ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್, ರಾಣಿಬೆನ್ನೂರಿನಲ್ಲಿ ಅರುಣ್ ಕುಮಾರ್ ಪೂಜಾರ, ವಿಜಯನಗರದಲ್ಲಿ ಆನಂದ್ ಸಿಂಗ್, ಕೆ.ಆರ್​. ಪುರದಲ್ಲಿ ಭೈರತಿ ಬಸವರಾಜು, ಯಶವಂತಪುರದಲ್ಲಿ ಎಸ್​.ಟಿ ಸೋಮಶೇಖರ್, ಕೆ.ಆರ್​. ಪೇಟೆಯಲ್ಲಿ ನಾರಾಯಣ ಗೌಡ, ಮಹಾಲಕ್ಷ್ಮೀ ಲೇಔಟ್​ನಲ್ಲಿ ಗೋಪಾಲಯ್ಯ, ಚಿಕ್ಕಬಳ್ಳಾಪುರದಲ್ಲಿ ಸುಧಾಕರ್​ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಶಾಕ್ ನೀಡಿದ್ದಾರೆ.

ಕೈ ತೆಕ್ಕೆಗೆ 2 ಸ್ಥಾನ, ದಳ ಶೂನ್ಯ:

ಚುನಾವಣೆಗೆ ಮುಂಚೆ ಕನಿಷ್ಟ 10 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಹೊರಹಾಕಿದ್ದ ಕಾಂಗ್ರೆಸ್ ರೋಷನ್​ ಬೇಗ್​ ಅವರಿಂದ ತೆರವಾಗಿದ್ದ ಶಿವಾಜಿ ನಗರ ಮತ್ತು ಹೆಚ್​. ವಿಶ್ವನಾಥ್ ಅವರಿಂದ ತೆರವಾಗಿದ್ದ ಹುಣಸೂರಿನಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಸಫಲವಾಗಿದೆ. ಇನ್ನೂ ಅನರ್ಹ ಶಾಸಕರಿಂದ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದ ಜೆಡಿಎಸ್​ ಈ ಚುನಾವಣೆಯಲ್ಲಿ ಶೂನ್ಯ ಸಾಧನೆಗೆ ತೃಪ್ತಿಪಟ್ಟುಕೊಂಡಿದೆ.

ಮಣ್ಣು ಮುಕ್ಕಿದ ಎಂಟಿಬಿ:

ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ಅತಿಹೆಚ್ಚು ಕುತೂಹಲ ಕೆರಳಿಸಿದ್ದ ಕ್ಷೇತ್ರ ಎಂದರೆ ಹೊಸಕೋಟೆ. ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಸದ ಬಿ.ಎನ್. ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಕೊನೆಗೂ ಟಿಕೆಟ್​ ಸಿಗದೆ ಎಂಟಿಬಿ ನಾಗರಾಜ್ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಅಲ್ಲದೆ, ಕ್ಷೇತ್ರದಲ್ಲಿ ಅಬ್ಬರದ ಪ್ರಚಾರವನ್ನೂ ನಡೆಸಿದ್ದರು. ಕ್ಷೇತ್ರದ ಸ್ವಾಭಿಮಾನಕ್ಕಾಗಿ ಮತ ಎಂಬ ಘೋಷಣೆಯೊಂದಿಗೆ ಚುನಾವಣೆಯನ್ನು ಎದುರಿಸಿದ್ದರು.  ಹೀಗೆ ಚುನಾವಣೆ ಎದುರಿಸಿದ್ದ ಶರತ್ ಬಚ್ಚೇಗೌಡ ಕೊನೆಗೂ ಅನುಭವಿ ಎಂಟಿಬಿ ವಿರುದ್ಧ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಎಂಟಿಬಿ ಪಾಲಿಗೆ ಈ ಚುನಾವಣಾ ಫಲಿತಾಂಶ ತೀರಾ ಬೇಸರವನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ