ರಾಯಚೂರು: ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಮತ್ತೊಮ್ಮೆ ಆಪರೇಶನ್ ಕಮಲದ ಯೋಚನೆಯಲ್ಲಿದೆಯಾ ಅನ್ನೋ ಅನುಮಾನಗಳು ಮೂಡುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ರಾಯಚೂರಿನ ಲಿಂಗಸುಗೂರು ಕಾಂಗ್ರೆಸ್ ಶಾಸಕ ಡಿ.ಎಸ್.ಹುಲಿಗೇರಿಯನ್ನ ಭೇಟಿಯಾಗಿ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಡಿಸಿಎಂ ಪುತ್ರ ಉಮೇಶ್ ಕಾರಜೋಳ ಡಿ.ಎಸ್.ಹುಲಿಗೇರಿ ಜೊತೆ ಸಮಾಲೋಚನೆ ನಡೆಸಿರುವ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಗೋವಿಂದ ಕಾರಜೋಳ, ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ, ನೆರೆ ಪರಿಹಾರ ಕಾರ್ಯದ ಬಗ್ಗೆ ವಿವರಿಸುತ್ತ ಡಿ.ಎಸ್.ಹುಲಿಗೇರಿಯವರನ್ನ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಮೊದಲಿಗೆ ಡಿ.ಎಸ್.ಹುಲಿಗೇರಿ ಅವರ ಲಿಂಗಸುಗೂರಿನ ಮುದಗಲ್ ನಿವಾಸದಲ್ಲಿ ಗೋವಿಂದ ಕಾರಜೋಳ ಭೇಟಿಯಾಗಿದ್ದರು. ಬಳಿಕ ಉಮೇಶ್ ಕಾರಜೋಳ ಎರಡು ದಿನಗಳ ಹಿಂದೆ ಡಿ.ಎಸ್.ಹುಲಿಗೇರಿಯನ್ನ ಭೇಟಿಯಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಹಿಂದೆಯೂ ಡಿ.ಎಸ್.ಹುಲಿಗೇರಿ ಬಿಜೆಪಿ ಹೋಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಶಾಸಕ ಡಿ.ಎಸ್.ಹುಲಿಗೇರಿ ಪಕ್ಷಬಿಡುವುದಿಲ್ಲ ಎಂದು ಆಪರೇಷನ್ ಕಮಲವನ್ನ ತಳ್ಳಿಹಾಕುತ್ತಾ ಬಂದಿದ್ದಾರೆ.