ಹೊಸದಿಲ್ಲಿ: ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಗ್ರಾಹಕರು ದರ ಏರಿಕೆಯಿಂದಾಗಿ ಈರುಳ್ಳಿ ಕೊಂಡು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಮಿಳುನಾಡಿನ ಮೊಬೈಲ್ ಮಾರಾಟಗಾರರೊಬ್ಬರು ಇದನ್ನೇ ನೆಪವಾಗಿಟ್ಟುಕೊಂಡು ಗ್ರಾಹಕರಿಗೆ ಈರುಳ್ಳಿ ಆಫರ್ ಬಿಟ್ಟಿದ್ದಾರೆ.
ತಾಂಜವೂರು ಜಿಲ್ಲೆಯ ಪಟ್ಟುಕೊಟ್ಟೈ ತಲಯಾರಿ ಸ್ಟ್ರೀಟ್ನಲ್ಲಿರುವ ಎಸ್ಟಿಆರ್ ಮೊಬೈಲ್ ಮಾರಾಟ ಮಳಿಗೆಯ ಮಾಲೀಕ, ತಮ್ಮ ಅಂಗಡಿಯಲ್ಲಿ ಮೊಬೈಲ್ ಕೊಂಡರೆ 1 ಕೆ.ಜಿ ಈರುಳ್ಳಿ ಉಚಿತವಾಗಿ ನೀಡುವುದಾಗಿ ಆಫರ್ ನೀಡಿದ್ದಾರೆ. ಈ ಆಫರ್ ಗಮನಿಸಿದ ಗ್ರಾಹಕರು ಮೊಬೈಲ್ ಜೊತೆಗೆ ನೀರುಳ್ಳಿ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್ಟಿಆರ್ ಮೊಬೈಲ್ ಅಂಗಡಿ ಮಾಲೀಕ ಸರವಣ ಕುಮಾರ್ ‘ಪಟ್ಟುಕೊಟ್ಟೈನಲ್ಲಿ ಇಂತಹ ಆಫರ್ ಯಾರು ಹೊರಡಿಸಿಲ್ಲ. ಈ ಆಫರ್ ಹೊರಡಿಸಿರುವುದರಿಂದ ನನ್ನ ಅಂಗಡಿಗೆ ಬರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ‘ ಎಂದಿದ್ದಾರೆ.
35 ವರ್ಷದ ಸರವಣ ಕುಮಾರ್ 8 ವರ್ಷಗಳಿಂದ ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ. ದಿನಕ್ಕೆ ಒಂದು ಅಥವಾ ಎರಡು ಮೊಬೈಲ್ಗಳು ಸೇಲ್ ಆಗುತ್ತಿದ್ದವು. ಆದರೆ ಮೊಬೈಲ್ ಖರೀದಿಸಿದರೆ 1 ಕೆ.ಜಿ ಈರುಳ್ಳಿ ಉಚಿತ ಪಡೆಯಿರಿ ಎಂಬ ಆಫರ್ನಿಂದಾಗಿ ವ್ಯಾಪಾರದಲ್ಲಿ ವ್ಯತ್ಯಾಸ ಕಾಣುತ್ತಿದೆ ಎಂದು ಹೇಳುತ್ತಾರೆ.
ಇನ್ನು ಮಹಿಳೆಯರಂತೂ ಈರುಳ್ಳಿ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ಕಾದು ಕುಳಿತ್ತಿದ್ದಾರೆ. ದೇಶದ ಮೆಟ್ರೋ ಸಿಟಿಗಳಾದ ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ಗಳಲ್ಲಿ ಈರುಳ್ಳಿ ಬೆಲೆ 150ರ ಗಡಿ ದಾಟಿದೆ. ತಮಿಲುನಾಡಿನಲ್ಲಿ ಈರುಳ್ಳಿ ಬೆಲೆ 140 ರಿಂದ 160 ರೂ. ಇದೆ.