ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ.
ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್ಕೌಂಟರ್ ಮಾಡಿದ್ದಾರೆ.
ನವೆಂಬರ್ 27ರಂದು 26 ವರ್ಷದ ಪಶುವೈದ್ಯೆಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈ ಕೃತ್ಯಕ್ಕೆ ಇವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಸಾಮೂಹಿಕ ಅತ್ಯಾಚಾರದ ಬಳಿಕ ಪಶುವೈದ್ಯೆ ಓಡಿಹೋಗಬಾರದು ಎನ್ನುವ ಉದ್ದೇಶದಿಂದ ಅವಳ ಕೈ ಕಾಲುಗಳನ್ನು ಕಟ್ಟಿದ್ದೆವು. ಅತ್ಯಾಚಾರದ ನಂತರವೂ ಸಂತ್ರಸ್ತೆಗೆ ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದೆವು. ಸಂತ್ರಸ್ತೆ ಪ್ರಜ್ಞೆ ತಪ್ಪಿದಾಗ ಆಕೆಯನ್ನು ಸೇತುವೆಯ ಕೆಳಗೆ ಸಾಗಿಸಲಾಗಿತ್ತು. ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ವಿ ಎಂದು ಮುಖ್ಯ ಆರೋಪಿ ಮೊಹಮ್ಮದ್ ಪಾಷಾ, ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಆಧರಿಸಿ ಮಾಧ್ಯಮ ವರದಿ ಮಾಡಿತ್ತು.