ಬೆಂಗಳೂರು,ಡಿ.5- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಆಪರೇಷನ್ ಕಮಲದ ಸುದ್ದಿ ಸದ್ದು ಮಾಡಿದೆ.
ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಹಲವು ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದು, ರಾಜ್ಯದಲ್ಲಿ ಮತ್ತೆ ಅನ್ಯ ಪಕ್ಷಗಳ ಶಾಸಕರನ್ನು ಸೆಳೆದುಕೊಳ್ಳುವ ಆಪರೇಷನ್ ಕಮಲ ನಡೆಯಲಿದೆಯೇ ಎಂಬ ಗುಮಾನಿ ಎದ್ದಿದೆ.
ಉಪಚುನಾವಣೆಯಲ್ಲಿ ನಾವು 15ಕ್ಕೆ 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಎದೆಯುಬ್ಬಿಸಿ ಹೇಳುತ್ತಿದ್ದಾರಾದರೂ ವಾಸ್ತವದ ಚಿತ್ರಣ ಬೇರೆ ಇದೆ. ಹೆಚ್ಚೆಂದರೆ ಸರಳ ಬಹುಮತ ಪಡೆಯುವಷ್ಟು ಸ್ಥಾನವನ್ನು ಗೆಲ್ಲಬಹುದೇ ಹೊರತು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಏಕೆಂದರೆ ಅನರ್ಹ ಶಾಸಕರ ವಿರುದ್ಧ ಕೇವಲ ರಾಜಕೀಯ ಪಕ್ಷಗಳ ಮುಖಂಡರಲ್ಲದೆ ಸಾರ್ವಜನಿಕ ವಲಯದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವು ಕಡೆ ಶಾಸಕರನ್ನು ಗ್ರಾಮಗಳಿಗೆ ಸೇರಿಸದೆ ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದಾರೆ. ಇದು ಆಡಳಿತಾರೂಢ ಬಿಜೆಪಿಗೆ ದಿಗಿಲು ಹುಟ್ಟಿಸಿದೆ.
ಗುಪ್ತಚರ ವಿಭಾಗ ಖಾಸಗಿ ಸಂಸ್ಥೆಗಳು ನೀಡಿರುವ ವರದಿಯಂತೆ 15 ಕ್ಷೇತ್ರಗಳ ಪೈಕಿ ಬಿಜೆಪಿ 8ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಇಲ್ಲವೇ ಅದಕ್ಕಿಂತಲೂ ಕಡಿಮೆಯಾಗಬಹುದೆಂಬ ಆತಂಕಕಾರಿ ವರದಿ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಸೇರಿದೆ.
ಇದರಿಂದ ತುಸು ಆತಂಕಕ್ಕೆ ಒಳಗಾಗಿರುವ ಬಿಎಸ್‍ವೈ ಶತಾಯಗತಾಯ ಸರ್ಕಾರವನ್ನು ಉಳಿಸಿಕೊಳ್ಳಲು ತಮ್ಮದೇ ಆದ ಕಾರ್ಯತಂತ್ರವನ್ನು ಹೆಣೆದಿದ್ದಾರೆ. ಡಿ.9ರಂದು 15 ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯಲಿದೆ.
ಇಂದು ಸಂಜೆ ನಂತರ ಶೇಕಡವಾರು ಮತದಾನ, ಹೋಬಳಿಯಿಂದ ಹಿಡಿದು ಬೂತ್ ಮಟ್ಟದವರೆಗೆ ಸಂಪೂರ್ಣವಾಗಿ ಮಾಹಿತಿ ಲಭ್ಯವಾಗುತ್ತದೆ. ಗುಪ್ತಚರ ವಿಭಾಗ ಹಾಗೂ ಖಾಸಗಿ ಏಜೆನ್ಸಿಗಳಿಂದ ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು, ಯಾವ ಕ್ಷೇತ್ರಗಳಲ್ಲಿ ಸೋಲಬಹುದು ಎಂಬುದರ ವರದಿ ನಾಳೆ ಬರಲಿದೆ.
ಈ ವರದಿಯನ್ನು ಆಧರಿಸಿ ಸರ್ಕಾರ ಬಹುಮತ ಪಡೆಯಲು ಹಿನ್ನಡೆಯಾಗುತ್ತದೆ ಎಂಬ ವರದಿ ಬಂದರೆ ತಕ್ಷಣವೇ 4ರಿಂದ 5 ಶಾಸಕರುಗಳಿಂದ ರಾಜೀನಾಮೆ ಕೊಡಿಸಲು ಕಾರ್ಯತಂತ್ರ ಹೆಣೆಯಲಾಗಿದೆ.
ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಫಲಿತಾಂಶದ ಬಳಿಕ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದರಿಂದ ಎಚ್ಚರಿಕೆ ಕ್ರಮವಾಗಿ ಎರಡೂ ಪಕ್ಷಗಳ 8ರಿಂದ 10 ಶಾಸಕರನ್ನು ಬಿಎಸ್‍ವೈ ಸಂಪರ್ಕಿಸಿದ್ದಾರೆಂದು ತಿಳಿದುಬಂದಿದೆ.
ಅದರಲ್ಲೂ ಉತ್ತರ ಕರ್ನಾಟಕದ 7, ಮೈಸೂರು ಭಾಗದ ಇಬ್ಬರು ಹಾಗೂ ತುಮಕೂರು ಮತ್ತು ಕೋಲಾರದ ಇಬ್ಬರು ಶಾಸಕರು ಕಾಂಗ್ರೆಸ್-ಜೆಡಿಎಸ್‍ಗೆ ಕೈಗೊಟ್ಟು ಬಿಜೆಪಿಯ ಕಮಲ ಮುಡಿಯಲು ಸಜ್ಜಾಗಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಹಬ್ಬಿದೆ.
ಈ ಎಲ್ಲ ಶಾಸಕರು ಖುದ್ದು ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದ್ದು, ರಾಜಕೀಯ ಬೆಳವಣಿಗೆಗಳ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಫಲಿತಾಂಶ ಪ್ರಕಟಗೊಂಡ ನಂತರ ರಾಜೀನಾಮೆ ನೀಡಿದರೆ ಆಪರೇಷನ್ ಕಮಲದ ಕುಖ್ಯಾತಿ ಪಕ್ಷಕ್ಕೆ ಅಂಟಿಕೊಳ್ಳಬಹುದೆಂಬ ಭೀತಿಯಿಂದ ಬಿಎಸ್‍ವೈ ಅಷ್ಟರೊಳಗೆ ಶಾಸಕರಿಂದ ರಾಜೀನಾಮೆ ಕೊಡಿಸಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ವಿಜಾಪುರದ ಇಬ್ಬರು, ಬೆಳಗಾವಿ ಮತ್ತು ಬಳ್ಳಾರಿಯ ಶಾಸಕರು ಕಮಲವನ್ನು ಮುಡಿಗೇರಿಸಲು ಈಗಾಗಲೇ ಸಜ್ಜಾಗಿದ್ದಾರೆ.
ಅಂತಿಮವಾಗಿ ಮತದಾನದ ಬಳಿಕ ಬರುವ ವರದಿ ನಂತರವೇ ಆಪರೇಷನ್ ಕಮಲದ ಸ್ಪಷ್ಟ ಚಿತ್ರಣ ಸಿಗಲಿದೆ.